ಕಲಬುರಗಿ:ನಗರದ ಕೊರೊನಾಹಾಟ್ ಸ್ಪಾಟ್ ಪ್ರದೇಶ ಮೋಮಿನಪುರ ಹಾಗೂ ಸುತ್ತಮುತ್ತಲಿನ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿ ಸೋಂಕಿನ ಲಕ್ಷಣವಿರುವ ವ್ಯಕ್ತಿಗಳಿಂದ ಸ್ಯಾಂಪಲ್ಸ್ ಸಂಗ್ರಹಣೆ ಕಾರ್ಯ ಆರಂಭಗೊಂಡಿದೆ.
ಕಲಬುರಗಿಯ ಮೋಮಿನಪುರ ಪ್ರದೇಶ ಒಳಗೊಂಡಂತೆ ನಗರದ ವಾರ್ಡ್ ಸಂಖ್ಯೆ 23, 24 ಮತ್ತು 25ರಲ್ಲಿ ಏಕಕಾಲಕ್ಕೆ 23 ಅಂಗನವಾಡಿ ಪ್ರದೇಶದ 1189 ಮನೆಗಳಿಗೆ ಭೇಟಿ ನೀಡಿದ ತಪಾಸಣಾ ತಂಡ 6,078 ಜನರನ್ನು ಸ್ಕ್ರೀನಿಂಗ್ ಮಾಡಿಸಲಾಗಿದೆ. ಮೊದಲ ದಿನ 99 ಸ್ಯಾಂಪಲ್ಸ್ ಪಡೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್ ತಿಳಿಸಿದ್ದಾರೆ.
60 ವರ್ಷ ದಾಟಿದ ಕೋ - ಮಾರ್ಬಿಡ್ ನಲ್ಲಿರುವ ಮತ್ತು ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದ ಒಟ್ಟು 99 ಸ್ಯಾಂಪಲ್ ಪಡೆಯಲಾಗಿದೆ ಎಂದು ಡಾ.ಎಂ.ಎ.ಜಬ್ಬಾರ್ ತಿಳಿಸಿದರು. ಪ್ರತಿ ಸ್ಕ್ರೀನಿಂಗ್ ತಂಡದಲ್ಲಿ ಒಬ್ಬ ವೈದ್ಯ, ಅಂಗನವಾಡಿ ಕಾರ್ಯಕರ್ತೆ ಹಾಗೂ ಮಿಡಲ್ ಹೆಲ್ತ್ ಪ್ರೊವೈಡರ್ ಇರಲಿದ್ದಾರೆ. ಜೊತೆಗೆ ಗಂಟಲು ದ್ರವ ಪಡೆಯಲು ಸ್ವ್ಯಾಬ್ ಸಂಗ್ರಹಣಾ ತಾಂತ್ರಿಕ ಸಿಬ್ಬಂದಿ ಕೂಡ ಇರುತ್ತಾರೆ.
ತಪಾಸಣೆ ಕಾರ್ಯದ ಉಸ್ತುವಾರಿಯನ್ನು ಆರೋಗ್ಯ ಇಲಾಖೆಯ ಕಂಟೇನ್‍ಮೆಂಟ್ ಝೋನ್ ನೋಡಲ್ ಅಧಿಕಾರಿ ಡಾ. ವೇಣುಗೋಪಾಲ್ ವಹಿಸಲಿದ್ದಾರೆ ಎಂದು ಡಾ. ಜಬ್ಬಾರ್ ಮಾಹಿತಿ ನೀಡಿದ್ದಾರೆ.