ಕಲಬುರಗಿ: ಜಿಲ್ಲೆಯ ಸುಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಸುಕ್ಷೇತ್ರ ಹಳಕರ್ಟಿ ಗ್ರಾಮದ ಆರಾಧ್ಯ ದೈವ ಶ್ರೀವೀರಭದ್ರೇಶ್ವರ ರಥೋತ್ಸವ ಬುಧವಾರ ಸಂಜೆ ಅದ್ಧೂರಿಯಾಗಿ ಜರುಗಿತು. ಕಳೆದ ಎರಡು ವರ್ಷಗಳಿಂದ ರದ್ದಾಗಿದ್ದ ರಥೋತ್ಸವ ಈ ಬಾರಿ ಅತ್ಯಂತ ಸಡಗರ, ಸಂಭ್ರಮದಿಂದ ನಡೆಯಿತು.
ಭಕ್ತರು ರಥಕ್ಕೆ ಕರ್ಜೂರ, ಬಾಳೆಹಣ್ಣು, ಬಾರೆಕಾಯಿ ಎಸೆದು ಹರಕೆ ಅರ್ಪಿಸಿದರು. ಇದಕ್ಕೂ ಮೊದಲು ರಥಬೀದಿಯಲ್ಲಿ ಕುಂಭ ಮೆರವಣಿಗೆ ಮತ್ತು ಚೌಡಮ್ಮನ ಆಡುವಿಕೆ ನಡೆಯಿತು.
ಸುಕ್ಷೇತ್ರ ಹಳಕರ್ಟಿ ಶ್ರೀವೀರಭದ್ರೇಶ್ವರ ರಥೋತ್ಸವ ಜಾತ್ರೆಯಲ್ಲಿ ಹಾಕಿದ್ದ ಜೋಕಾಲಿ, ಆಟಿಕೆ ಅಂಗಡಿಗಳು ಚಿಣ್ಣರನ್ನು ಸೆಳೆದ್ರೆ, ಜಿಲೇಬಿ, ಬಜ್ಜಿ, ಮಿಠಾಯಿ ಸೇರಿದಂತೆ ರುಚಿ ರುಚಿಯಾದ ತಿನಿಸುಗಳು ಭಕ್ತರನ್ನು ಆಕರ್ಷಿಸಿದವು. ಜೊತೆಗೆ ಮದ್ದು ಸುಡುವ ಕಾರ್ಯಕ್ರಮ ಸಹ ಎಲ್ಲರ ಗಮನ ಸೆಳೆಯಿತು.
ಹಳಕರ್ಟಿ ಶ್ರೀವೀರಭದ್ರೇಶ್ವರ ಜಾತ್ರೆಯ ವಿಶೇಷ ಅಂದ್ರೆ, ವೀರಾವೇಷದ ಪುರವಂತರ ಕುಣಿತ. ಈ ಕುಣಿತ ಹಾಗೂ ಅಗ್ನಿ ಪ್ರವೇಶ ನೋಡಲು ರಾಜ್ಯ ಮಾತ್ರವಲ್ಲದೇ ಬೇರೆ ರಾಜ್ಯದ ಜನರು ಸಹ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಶತಮಾನಗಳಿಂದ ಈ ಜಾತ್ರೆ ನಡೆದುಕೊಂಡು ಬಂದಿದ್ದು, ಪುರವಂತರ ಶಸ್ತ್ರ ಧಾರಣೆ ಮತ್ತು ಕೆಂಡ ತುಳಿಯುವ ದೃಶ್ಯ ಭಕ್ತಿಯ ಪರಾಕಾಷ್ಠೆ ಹೆಚ್ಚಿಸಿತು. ಜಾತ್ರೆಯಲ್ಲಿ ಸೇರಿದ್ದ ಅಪಾರ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಬಿಗಿ ಪೊಲೀಸ್ ಭದ್ರತೆ ಕೈಗೊಂಡಿದ್ದರು.