ಕಲಬುರಗಿ: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ಸಾವಿರಾರು ಬಡ ಮಕ್ಕಳು ಓದುವ ಶಾಲೆಯ ಬಾಗಿಲನ್ನು ಸರ್ಕಾರ ಮುಚ್ಚುತ್ತಲೇ ಬಂದಿದೆ. ಆದರೆ, ಹಲವು ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳಿದ್ದರೂ ಮೂಲಸೌಕರ್ಯ ಕಲ್ಪಿಸದೇ ನಿರ್ಲಕ್ಷ್ಯ ತೋರಲಾಗುತ್ತಿದೆ. ಇದಕ್ಕೆ ಉದಾಹರಣೆ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಾ ಗ್ರಾಮದ ಸರ್ಕಾರಿ ಹಿರಿಯ ಶಾಲೆ.
ಘತ್ತರಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಶಾಲೆಯ ಮೇಲ್ಛಾವಣಿ ಕುಸಿಯುವ ಹಂತಕ್ಕೆ ತಲುಪಿದ್ದು, ಮಕ್ಕಳು ಹೊರಗಡೆ ಕುಳಿತು ಪಾಠ ಕೇಳುವ ದುಸ್ಥಿತಿ ಉಂಟಾಗಿದೆ.
ಸೋರುತ್ತಿರುವ ಘತ್ತರಗಾ ಸರ್ಕಾರಿ ಶಾಲೆ ಕಟ್ಟಡ ಮೇಲ್ಛಾವಣಿಗೆ ತಾಡಪತ್ರಿ ಕಟ್ಟಿ ಪಾಠ: ಮಳೆ ಬಂದ್ರೆ ಸಾಕು ಶಾಲೆಯ ತುಂಬೆಲ್ಲಾ ನೀರು ನಿಂತು ಕೆರೆಯಂತಾಗುತ್ತದೆ. ಹೀಗಾಗಿ, ಮೇಲ್ಛಾವಣಿಗೆ ಶಿಕ್ಷಕರು ತಾಡಪತ್ರಿ ಕಟ್ಟಿದ್ದಾರೆ. ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ 342 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 8 ಜನ ಶಿಕ್ಷಕರಿದ್ದಾರೆ. ಪ್ರೌಢಶಾಲೆಯಲ್ಲಿ ಒಂಬತ್ತನೇ ಹಾಗೂ ಹತ್ತನೇ ತರಗತಿಯಲ್ಲಿ ಒಟ್ಟು 220 ವಿದ್ಯಾರ್ಥಿಗಳು, 10 ಜನ ಶಿಕ್ಷಕರಿದ್ದಾರೆ. ಸದ್ಯಕ್ಕೆ ಶಾಲೆ ಇರುವ ಸ್ಥಳ ಮುಜರಾಯಿ ಇಲಾಖೆಗೆ ಸೇರಿದ್ದರಿಂದ ಗ್ರಾಮ ಪಂಚಾಯತ್ ವತಿಯಿಂದ ಅಭಿವೃದ್ಧಿ ಮಾಡಲು ಹೊರಟರೆ ಅದನ್ನು ಮುಜರಾಯಿ ಇಲಾಖೆ ಅಧಿಕಾರಿಗಳು ತಡೆಯುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕಿಡಿಗೇಡಿಗಳ ಅಡ್ಡ: ಶಾಲಾ ಆವರಣಕ್ಕೆ ತಡೆಗೋಡೆ ಇಲ್ಲದ ಕಾರಣ ರಾತ್ರಿಯಾದ್ರೆ ಸಾಕು ಶಾಲೆ ಕಿಡಿಗೇಡಿಗಳ ಅಡ್ಡವಾಗಿ ಮಾರ್ಪಾಡಾಗುತ್ತದೆ. ಕೆಲ ಪುಂಡರು ಇಲ್ಲಿ ಮದ್ಯಸೇವನೆ ಮಾಡುವುದಲ್ಲದೆ ಅಲ್ಲೇ ಬಾಟಲಿಗಳನ್ನು ಬಿಸಾಕಿ ಹೋಗುತ್ತಾರೆ. ಬಾಟಲಿಗಳ ಚೂರು ಮಕ್ಕಳ ಕಾಲಿಗೆ ಚುಚ್ಚುತ್ತದೆ. ಇಲ್ಲಿ ಶೌಚಾಲಯದ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಸರ್ಕಾರ ತುರ್ತಾಗಿ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕೆಂದು ಶಿಕ್ಷಕರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಅಥಣಿ: ಸೋರುತ್ತಿರುವ ಶಾಲೆಗಳು, ಆತಂಕದಲ್ಲಿ ಪಾಲಕರು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ