ಕಲಬುರಗಿ:ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದವರ ಮೇಲೆ ಡಿಜೆ ಇದ್ದ ಮಿನಿ ಲಾರಿ ಹರಿದು ನಾಲ್ವರು ಸಾವನ್ನಪ್ಪಿ, 10ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸೇಡಂ ತಾಲೂಕಿನ ಕಡತಾಲ ತಾಂಡಾದಲ್ಲಿ ಕಳೆದ ಬುಧವಾರ ರಾತ್ರಿ ದುರಂತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೇಡಂ ತಾಲೂಕಿನ ಮೆದಕ ತಾಂಡಾದ ಸುಗಣಾಬಾಯಿ ಚೌವ್ಹಾಣ (40), ತೆಲಂಗಾಣದ ದುಂಕುಡನಾಯಕ ತಾಂಡಾದ ವಿಜ್ಜಿಬಾಯಿ ರಾಥೋಡ್ (30) ಹಾಗೂ ಕುಮಾರನಾಯಕ ರಾಥೋಡ್ (35) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಮದನಾ ತಾಂಡದ ಯುವಕ ಹಾಗೂ ಕಡತಾಲ ತಾಂಡಾದ ಯುವತಿಯ ಮದುವೆ ಗುರುವಾರ ಕಡತಾಲ ತಾಂಡಾದಲ್ಲಿ ನಡೆಯಬೇಕಾಗಿತ್ತು. ಮದುವೆಯ ಹಿಂದಿನ ದಿನ (ಬುಧವಾರ) ಮದುಮಗಳನ್ನು ಕಡತಾಲ ತಾಂಡಾಕ್ಕೆ ಕರೆದುಕೊಂಡು ಬರಲಾಗಿದೆ. ಮದುಮಗಳನ್ನು ಸ್ವಾಗತಿಸಲು ತೆಲಂಗಾಣದಿಂದ ತರಿಸಲಾಗಿದ್ದ ಡಿಜೆ ಹಾಕಿ ರಾತ್ರಿ ಮೆರವಣಿಗೆ ನಡೆಯುತ್ತಿತ್ತು. ಬೇರೆ ಊರುಗಳಿಂದ ಆಗಮಿಸಿದ್ದ ನೆಂಟರು, ಸಂಬಂಧಿಕರು, ಕುಣಿದು ಸಂಭ್ರಮಿಸುತ್ತಿದ್ದರು.