ಕಲಬುರಗಿ:ಕಳೆದ ಐದು ದಿನಗಳ ಹಿಂದೆ ನಗರದ ಎಂಎಸ್ಕೆ ಮಿಲ್ ಬಡಾವಣೆಯಲ್ಲಿ ನಡೆದ ಯುವಕ ಸೋಹೆಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಣಕಾಸಿನ ವ್ಯವಹಾರ ಮತ್ತು ಯುವತಿ ವಿಚಾರವಾಗಿ ಈ ಕೊಲೆ ನಡೆದಿರುವುದು ಪೊಲೀಸರ ವಿಚಾರಣೆ ವೇಳೆ ಬಯಲಿಗೆ ಬಂದಿದೆ.
ಏ.1ರಂದು ಹೋಟೆಲ್ನಲ್ಲಿ ಕುಳಿದ್ದ ಸೋಹೆಲ್ ದೇಹಕ್ಕೆ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಮುಜಾಮಿಲ್ ಕುರೇಶಿ, ಜುನೇದ್ ಅಲಿ, ಮೊಹಮ್ಮದ್ ಆಯನ್ ಜಡ್ದಿ, ಅಬ್ರಾಬ್ ಹುಸೇನ್ ಎಂಬುವವರನ್ನು ಬಂಧಿಸಿದ್ದಾರೆ.
ಒಂದೇ ಹುಡುಗಿಯ ಮೇಲೆ ಇಬ್ಬರು ಮನಸ್ಸು:ಕೊಲೆಯಾದ ಸೋಹೆಲ್ ಮತ್ತು ಬಂಧಿತ ಆರೋಪಿಗಳ ಪೈಕಿ ಒಬ್ಬನಾದಮುಜಾಮಿಲ್ ಇಬ್ಬರೂ ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಕೂಡಾ ನಡೆದಿತ್ತು. ಈ ನಡುವೆ ಮುಜಾಮಿಲ್ ಪ್ರೀತಿ ಮಾಡುತ್ತಿದ್ದ ಯುವತಿಯ ಮೇಲೆ ಸೋಹೆಲ್ ಕಣ್ಣು ಹಾಕಿದ್ದ ಎಂದು ತಿಳಿದು ಬಂದಿದೆ.
ಅಲ್ಲದೇ, ಅದೇ ಯುವತಿಯನ್ನು ಸೋಹೆಲ್ ಪ್ರೀತಿ ಮಾಡತೊಡಗಿದ್ದನಂತೆ. ಇದರಿಂದಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಮುಜಾಮಿಲ್ ತನ್ನ ಸಹಚರರೊಂದಿಗೆ ಸೇರಿ ಸೋಹೆಲ್ ಮೇಲೆ ದಾಳಿ ಮಾಡಿದ್ದಾನೆ. ಹೋಟೆಲ್ನಲ್ಲಿ ಬಿರಿಯಾನಿ ತಿನ್ನುತ್ತಾ ಕುಳಿತಾಗ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕ್ರಿಕೆಟ್ ಬೆಟ್ಟಿಂಗ್ ಹಣದ ವಿಚಾರವಾಗಿ ಗಲಾಟೆ: ಡ್ರ್ಯಾಗರ್ನಿಂದ ಇರಿದು ಯುವಕನ ಹತ್ಯೆ