ಇಡೀ ಕುಟುಂಬವನ್ನೇ ನುಂಗಿದ ವೈರಸ್!.. ಮೊದಲು ಅಮ್ಮ ಬಲಿ.. ಆಮೇಲೆ ಒಂದೇ ದಿನ ತಂದೆ- ಮಗ ಕೊರೊನಾಗೆ ಆಹುತಿ - ಅಪ್ಪ, ಅಮ್ಮ ಮತ್ತು ಮಗ ಕೊರೊನಾಗೆ ಸಾವು
ಕೊರೊನಾಗೆ ಅಪ್ಪ, ಅಮ್ಮ ಮತ್ತು ಮಗ ಬಲಿಯಾಗಿದ್ದಾರೆ. 15 ದಿನಗಳಲ್ಲಿ ಮೂವರನ್ನು ಕಳೆದುಕೊಂಡ ಕುಟುಂಬ, ಕಣ್ಣೀರಲ್ಲಿ ಕೈತೊಳೆಯುತ್ತಿದೆ.
ಕಲಬುರಗಿ:ಕೊರೊನಾ ಮಹಾಮಾರಿಗೆ ತಂದೆ, ತಾಯಿ ಮತ್ತು ಮಗ ಮೃತಪಟ್ಟ ಮನಕಲುಕುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ಇಲ್ಲಿನ ಮಹಾದೇವ ನಗರದ ನಿವಾಸಿಗಳಾದ ತಂದೆ ಶ್ರೀಪತಿರಾವ ಬಡಿಗೇರ (66), ತಾಯಿ ಮಹಾದೇವಿ ಬಡಿಗೇರ (58) ಮತ್ತು ಪುತ್ರ ಮೌನೇಶಕುಮಾರ (42) ಕೊರೊನಾಗೆ ಬಲಿಯಾದವರು.
ಮೌನೇಶಕುಮಾರ ಅವರ ತಾಯಿ ಮಹಾದೇವಿ ಅವರಿಗೆ ಕೊರೊನಾ ಸೋಂಕು ತಗುಲಿ ಅಸ್ವಸ್ಥರಾಗಿದ್ದರು. ಇದರಿಂದಾಗಿ ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪುತ್ರ ಮೌನೇಶಕುಮಾರ ಅವರು ತಾಯಿಯನ್ನು ನೋಡಲು ಕಲಬುರಗಿಗೆ ಬಂದಿದ್ದರು. 15 ದಿನ ಹಿಂದೆ ಚಿಕಿತ್ಸೆ ಫಲಿಸದೆ ತಾಯಿ ಮೃತರಾಗಿದ್ದಾರೆ. ನಂತರ ಅವರ ತಂದೆ ಶ್ರೀಪತಿರಾವ ಹಾಗೂ ಮೌನೇಶಕುಮಾರ ಇಬ್ಬರಿಗೂ ಪಾಸಿಟಿವ್ ದೃಢಪಟ್ಟು ಆಸ್ಪತ್ರೆ ಸೇರಿದ್ದರು. ಆದ್ರೆ ದುರಾದೃಷ್ಟವಶಾತ್ ಗುರುವಾರ ತಂದೆ, ಮಗ ಇಬ್ಬರೂ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಮೌನೇಶಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. 15 ದಿನಗಳಲ್ಲಿ ಅಪ್ಪ, ಅಮ್ಮ, ಮಗನನ್ನು ಕಳೆದುಕೊಂಡ ಕುಟುಂಬದ ರೋಧನೆ ಮುಗಿಲು ಮುಟ್ಟಿದೆ.