ಕಲಬುರಗಿ :ಪ್ರೋತ್ಸಾಹ ಧನ ಘೋಷಿಸದ ಸರ್ಕಾರದ ವಿರುದ್ಧ ಶಾಸಕರಾದ ಪ್ರಿಯಾಂಕ್ ಖರ್ಗೆ ಛಾಟಿ ಬಿಸಿದ್ದಾರೆ. ಬೆಳ್ಳಗಿರುವುದೆಲ್ಲ ಹಾಲಲ್ಲ, ಹಸಿರು ಶಾಲು ಹೊದ್ದವರೆಲ್ಲ ರೈತರ ಪರವಲ್ಲ ಎಂದು ಸಿಎಂ ಬಿ ಎಸ್ ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ.
ಈ ಕುರಿತು ಟ್ಟೀಟ್ ಮಾಡಿದ ಪ್ರಿಯಾಂಕ್ ಖರ್ಗೆ, ಈ ಹಿಂದೆ ತೊಗರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ರದ್ದು ಪಡಿಸಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ತೊಗರಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿರುವಾಗಲೇ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡದೆ ಅನ್ನದಾತರಿಗೆ ಅನ್ಯಾಯವೆಸಗಿದೆ.
ಸಿಎಂ ಬಿ ಎಸ್ ಯಡಿಯೂರಪ್ಪನವರು ಬೀದರ್ಗೆ ಭೇಟಿ ನೀಡಿದ್ದಾಗ ಪ್ರತಿ ರೈತರಿಂದ 20 ಕ್ವಿಂಟಾಲ್ ತೊಗರಿ ಖರೀದಿಸುವ ಭರವಸೆ ನೀಡಿದ್ದರು. ಆದರೆ, ಸಿಎಂ ಭರವಸೆ ಕೇವಲ ವೇದಿಕೆಗೆ ಸೀಮಿತವಾಗಿದೆ.
ಬೆಳ್ಳಗಿರುವುದೆಲ್ಲ ಹಾಲಲ್ಲ, ಹಸಿರು ಶಾಲು ಹೊದ್ದವರೆಲ್ಲ ರೈತರ ಪರವಲ್ಲ ಎಂಬುದನ್ನು ಸಿಎಂ ಸಾಬೀತುಪಡಿಸಿದ್ದಾರೆ ಎಂದು ಪ್ರೀಯಾಂಕ್ ಗುಡುಗಿದ್ದಾರೆ.
ಬಿಜೆಪಿ ನಾಯಕರ ದಿವ್ಯಮೌನಕ್ಕೆ ಪ್ರಿಯಾಂಕ್ ಸಿಡಿಮಿಡಿ :ಕಲಬುರಗಿ ಜಿಲ್ಲೆಯ ಬಿಜೆಪಿ ನಾಯಕರ ದಿವ್ಯಮೌನವನ್ನ ಸಹ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ತೊಗರಿ ಬೆಳೆಗಾರರ ಸಂಕಷ್ಟದ ಕುರಿತು ಜಿಲ್ಲೆಯ ಯಾವ ಬಿಜೆಪಿ ನಾಯಕರೂ ತುಟಿಬಿಚ್ಚಿಲ್ಲ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂಟಾಲ್ಗೆ ಗರಿಷ್ಠ 550 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಸರ್ಕಾರ ಇನ್ನಾದ್ರೂ ಪ್ರೋತ್ಸಾಹ ಧನ ಘೋಷಿಸಿ ರೈತರ ನೆರವಿಗೆ ಧಾವಿಸಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.