ಕರ್ನಾಟಕ

karnataka

ETV Bharat / city

ಮನೆಗಳ ಮುಂದೆ ಚರಂಡಿ ನೀರು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಿವಾಸಿಗಳು - ಕಳಪೆ ಕಾಮಗಾರಿ

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಕಲಬುರಗಿ ಕೂಡ ಒಂದು. ಚರಂಡಿ ನಿರ್ವಹಣೆಯಲ್ಲಿ ಮಹಾನಗರ ಪಾಲಿಕೆ ಸಂಪೂರ್ಣ ವಿಫಲವಾಗುತ್ತಿರುವ ಪರಿಣಾಮ ಬಡಾವಣೆಗಳ ನಿವಾಸಿಗಳು ಪಡಬಾರದ ಕಷ್ಟ ಪಡುವಂತಹ ದುಃಸ್ಥಿತಿ ಒದಗಿ ಬಂದಿದೆ.

drainage-problems-
ಚರಂಡಿ ನೀರು

By

Published : Sep 30, 2020, 6:43 PM IST

ಕಲಬುರಗಿ: ಮಳೆಗಾಲದಲ್ಲಿ ಚರಂಡಿಗಳ ಅವ್ಯವಸ್ಥೆಯಿಂದ ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಾ ದಿನಗಳನ್ನು ದೂಡುತ್ತಿದ್ದಾರೆ. ನಗರದ ಸುಮಾರು 25 ಕಿಲೋಮೀಟರ್ ಉದ್ದದಲ್ಲಿ ಚರಂಡಿ ನೀರು ಹರಿದು ಭೀಮಾ ನದಿ ಪಾತ್ರದಲ್ಲಿರುವ ಶುದ್ಧೀಕರಣ ಘಟಕಕ್ಕೆ ಸೇರಬೇಕು. ಆದರೆ, ಪಾಲಿಕೆಯ ಅವೈಜ್ಞಾನಿಕ ಚರಂಡಿ ವ್ಯವಸ್ಥೆ ಹಾಗೂ ಸಮರ್ಪಕವಾಗಿ ನೀರು ಹರಿದು ಹೋಗದ ಕಾರಣ ನೀರು ರಸ್ತೆ ಹಾಗೂ ಮನೆಗಳಿಗೆ ನುಗ್ಗುತ್ತಿದ್ದು, ಜನರು ಪಡಬಾರದ ಕಷ್ಟಪಡುತ್ತಿದ್ದಾರೆ. ಮಳೆಗಾಲದಲ್ಲಿ ಸಮಸ್ಯೆ ತಲೆದೋರಿದಾಗ ತಾತ್ಕಾಲಿಕ ಶಮನಕ್ಕೆ ಮುಂದಾಗುವ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಕೊರೊನಾ ಆತಂಕದಲ್ಲಿರುವ ಜನತೆಗೆ ಇದೀಗ ಚರಂಡಿ ಅವ್ಯವಸ್ಥೆಯಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 55 ವಾರ್ಡ್​ಗಳಿವೆ. 55 ಪಾಲಿಕೆ ಸದಸ್ಯರಿದ್ದಾರೆ. 2019ರ ಮಾರ್ಚ್​​ನಲ್ಲಿ ಪಾಲಿಕೆ ಸದಸ್ಯರ ಕಾಲಾವಧಿ ಮುಕ್ತಾಯವಾಗಿದೆ. ಆಗಿನ ಪಾಲಿಕೆ ಸದಸ್ಯ ಹುಲಿಗೆಪ್ಪ ಕನಕಗಿರಿ ಸೇರಿ ಇತರರು ಕ್ಷೇತ್ರ ಮರು ವಿಂಗಡನೆ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮೀಸಲಾತಿ ಪ್ರಕಟಿಸುವಲ್ಲಿ ಸರ್ಕಾರ ಅವೈಜ್ಞಾನಿಕ ನೀತಿ ಅನುಸರಿಸಿದೆ ಎಂದು ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕೊರ್ಟ್ ಈ ಕುರಿತು ಸರ್ಕಾರಕ್ಕೆ ಕಾರಣ ಕೇಳಿ ನೋಟಿಸ್ ನೀಡಿ ಚುನಾವಣೆ ಪ್ರಕ್ರಿಯೆಗೆ ತಡೆ ನೀಡಿತ್ತು. ಇದರಿಂದಾಗಿ 2019ರಲ್ಲಿ ನಡೆಯಬೇಕಿದ್ದ ಚುನಾವಣೆಗಳು ಮುಂದೂಡಲ್ಪಟ್ಟಿದ್ದವು. ನಂತರದಲ್ಲಿ ಸರ್ಕಾರ ತನ್ನ ಹೊಸ ನೀತಿ ಕೈಬಿಟ್ಟಿದೆ. ಅವಧಿ ಮುಗಿದು ಒಂದೂವರೆ ವರ್ಷವಾದರೂ ಚುನಾವಣೆ ನಡೆಸುವ ಕುರಿತು ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಜನಪ್ರತಿನಿಧಿಗಳು ಇಲ್ಲದೇ ಕಾರಣ ಜನರಿಗೆ ಸಿಗಬೇಕಾದ ಚರಂಡಿ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದೇ ತೊಂದರೆ ಅನುಭವಿಸುವಂತಾಗಿದೆ.

ಅವೈಜ್ಞಾನಿಕ ಚರಂಡಿ ವ್ಯವಸ್ಥೆ

ಪ್ರತಿವರ್ಷ ಕೋಟಿ ಕೋಟಿ ಅನುದಾನ ಹರಿದು ಬಂದರೂ ಕಲಬುರಗಿ ನಗರ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಈ ಹಿಂದೆ ನಡೆದಿರುವ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಇಂದಿಗೂ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಪಾಲಿಕೆ ಸದಸ್ಯತ್ವ ಸ್ಥಾನಕ್ಕೆ ಚುನಾವಣೆ ನಡೆಸಿ ಜನಾಡಳಿತದ ಮೂಲಕ ನಗರದ ಜನತೆಗೆ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕು ಎಂಬುದು ನಾಗರಿಕರ ಒತ್ತಾಸೆಯಾಗಿದೆ.

ABOUT THE AUTHOR

...view details