ಕಲಬುರಗಿ: ಕರ್ನಾಟಕದಲ್ಲಿ ಎಐಎಂಐಎಂ ತಾಲಿಬಾನ್ ಇದ್ದಂತೆ. ತಾಲಿಬಾನ್, ಎಐಎಂಐಎಂ ಹಾಗೂ ಎಸ್‌ಡಿಪಿಐ ಈ ಮೂರರ ನಿಲುವು ಒಂದೇ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ.
ನಿನ್ನೆ ಕಲಬುರಗಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ, ಎಸ್‌ಡಿಪಿಐ ಮತ್ತು ತಾಲಿಬಾನ್ ಒಂದೇ ಗುರಿ ಆಗಿದೆ. ಜನರಲ್ಲಿ ಆತಂಕ ಹುಟ್ಟಿಸುವ ಕೆಲಸ ಒಂದು ದಿನ ಅಂತ್ಯ ಆಗಲೇಬೇಕು, ಆಗಿಯೇ ಆಗುತ್ತದೆ. ತಾಲಿಬಾನ್‌ಗಿರಿ ಕಲಬುರ್ಗಿಯಲ್ಲಿ ನಡೆಯುವುದಿಲ್ಲ ಎಂದರು.
ಸಿ.ಟಿ.ರವಿ ಹೇಳಿಕೆಗೆ ಎಐಎಂಐಎಂ ಆಕ್ರೋಶ
ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಎಐಎಂಐಎಂ, ಸಿ.ಟಿ.ರವಿ ಏನೂ ಅರಿಯದ ವ್ಯಕ್ತಿ. ಅವಕಾಶ ಸಿಕ್ಕಿದೆ ಅಂತ ಬಾಯಿಗೆ ಬಂದಿದ್ದೆಲ್ಲಾ ಹೇಳುವುದು ಸರಿಯಲ್ಲ ಎಂದು ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷ ಇಲಿಯಾಸ್ ಸೇಠ್ ಬಾಗಭಾನ್ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 55 ವಾರ್ಡ್ ಸದಸ್ಯರ ಚುನಾವಣೆ ನಡೆಯಲಿದ್ದು, ಇದರಲ್ಲಿ 20 ಸದಸ್ಯ ಸ್ಥಾನಕ್ಕೆ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಣದಲ್ಲಿರುವ ಎಲ್ಲರನ್ನೂ ಗೆಲ್ಲಿಸುವ ಮೂಲಕ ಜನರೇ ಬಿಜೆಪಿ ನಾಯಕರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಇಲಿಯಾಸ್ ಹೇಳಿದ್ದಾರೆ.