ಕರ್ನಾಟಕ

karnataka

ETV Bharat / city

ಕಲಬುರಗಿಯಲ್ಲಿ ಟ್ಯೂಷನ್​ಗೆಂದು ಹೋದ ಕಾಲೇಜು ವಿದ್ಯಾರ್ಥಿ ಕಿಡ್ನಾಪ್!

ಮೂರು ದಿನಗಳ ಹಿಂದೆ ಟ್ಯೂಷನ್​ ಕ್ಲಾಸ್​ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಪಿಯುಸಿ ವಿದ್ಯಾರ್ಥಿ ಸಂತೋಷ್​ ಚೌಹಾಣ್​ ಎಂಬಾತ ಇಲ್ಲಿಯವರೆಗೆ ಮನೆಗೆ ಬಂದಿಲ್ಲ. ಸೈಕಲ್​ ವಿಚಾರಕ್ಕೆ ಗಲಾಟೆ ನಡೆದಿದ್ದು, ಆ ವಿಷಯಕ್ಕೆ ಆತನನ್ನು ಕಿಡ್ನಾಪ್​ ಮಾಡಲಾಗಿದೆ. ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು ಸಂತೋಷನ ನಂಬರ್​ನಿಂದಲೇ ಕರೆ‌ ಮಾಡಿದ್ದಾರೆ. ದುರುದ್ದೇಶದಿಂದಲೇ ತಮ್ಮನನ್ನು ಕಿಡ್ನಾಪ್​ ಮಾಡಲಾಗಿದೆ ಎಂದು ಸಹೋದರ ಆಕಾಶ್​ ದೂರಿದ್ದಾರೆ.

Santhosh Chouhan
ಸಂತೋಷ್​ ಚೌಹಾಣ್

By

Published : Mar 13, 2022, 4:18 PM IST

ಕಲಬುರಗಿ: ಸೈಕಲ್ ವಿಚಾರದಲ್ಲಿ ಗಲಾಟೆ ನಡೆದು ಪಿಯುಸಿ ವಿದ್ಯಾರ್ಥಿಯ ಅಪಹರಣ ಮಾಡಲಾಗಿದೆ ಎಂಬ ಆರೋಪ ಇಲ್ಲಿನ ವಿಶ್ವವಿದ್ಯಾಲಯ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಮೂರು ದಿನಗಳ ಹಿಂದೆ ಟ್ಯೂಷನ್​ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಪಿಯುಸಿ ವಿದ್ಯಾರ್ಥಿ ಇಲ್ಲಿವರೆಗೆ ಮನೆಗೆ ಬಾರದ ಕಾರಣ ಪೋಷಕರು ಆತಂಕದಲ್ಲಿದ್ದಾರೆ.

ಸಂತೋಷ್​ ಚೌಹಾಣ್ ತಾಯಿ ಹಾಗೂ ಸಹೋದರ

ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿ ಸೈನ್ಸ್ ಓದುತ್ತಿರುವ ಸಂತೋಷ ಚೌಹಾಣ್​ (17) ಕಿಡ್ನಾಪ್ ಆಗಿರುವ ವಿದ್ಯಾರ್ಥಿ. ಕಲಬುರಗಿಯ ಶಹಾಬಾದ ರಸ್ತೆ ಮಾತಾ ಮಾಣಿಕೇಶ್ವರಿ ಕಾಲೊನಿ ನಿವಾಸಿಯಾದ ಸಂತೋಷ, ಪ್ರತಿನಿತ್ಯ ಕಾಲೇಜು ಹಾಗೂ ಮನೆಗೆ ಓಡಾಡಲು ತನ್ನ ಸ್ನೇಹಿತನ ಬಳಿ ಮೂರು ಸಾವಿರ ರೂಪಾಯಿಗೆ ಸೈಕಲೊಂದನ್ನು ಖರೀದಿ ಮಾಡಿದ್ದನು. ನಂತರ ಅದೇ ಸೈಕಲ್​ನ್ನು ಕಾಲೇಜಿಗೆ ತೆಗೆದುಕೊಂಡು ಹೋದಾಗ ಅದು‌ ಕಳ್ಳತನ ಮಾಡಿರುವ ಸೈಕಲ್ ಆಗಿದ್ದು, ಸಂತೋಷನ ಸ್ನೇಹಿತ ಸೈಕಲ್ ಕದ್ದು ಮಾರಾಟ ಮಾಡಿದ್ದಾನೆ ಎಂದು ಸೈಕಲ್​ನ ಮೂಲ ವಾರಸುದಾರ ಕಾಲೇಜಿಗೆ ಬಂದು ಸಂತೋಷ್ ಜೊತೆ ಗಲಾಟೆ ಮಾಡಿ ಸೈಕಲ್ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗ್ತಿದೆ.

ನಂತರ ಅಂದು ಸಂಜೆ ಮನೆಯಿಂದ ರಾಜಾಪುರ ಬಡಾವಣೆಯಲ್ಲಿರುವ ಟ್ಯೂಷನ್‌ ಕ್ಲಾಸ್​ಗೆ ಹೋಗಿ ಬರುವುದಾಗಿ ಮನೆಯಿಂದ ಸಂತೋಷ ಹೋಗಿದ್ದು, ಮೂರು ದಿನವಾದರೂ ಮನೆಗೆ ಮರಳಿಲ್ಲ. ಮಾರ್ಗ ಮಧ್ಯೆ ದುಷ್ಕರ್ಮಿಗಳು ಸಂತೋಷನನ್ನು ಕಿಡ್ನಾಪ್​ ಮಾಡಿದ್ದಾರೆ. ಮಾರ್ಚ್ 11ರಂದು ಈ ಘಟನೆ‌ ನಡೆದಿದೆ. ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು ಸಂತೋಷನ ನಂಬರ್​ನಿಂದಲೇ ಕರೆ‌ ಮಾಡಿದ್ದಾರೆ. ಈ ವೇಳೆ ಹಿಂದೆಯಿಂದ ಸಂತೋಷ ಸಹಾಯಕ್ಕಾಗಿ ಅಂಗಲಾಚುವ ಶಬ್ದ ಕೂಡಾ ಕೇಳಿ ಬಂದಿದೆ. ಕರೆ ಖಡಿತಗೊಂಡ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಲಾಗಿದೆ. ಯಾವುದೋ ದುರುದ್ದೇಶದಿಂದ ಸಂತೋಷನನ್ನು ಕಿಡ್ನಾಪ್​​ ಮಾಡಲಾಗಿದೆ ಎಂದು ಆತನ ಸಹೋದರ ಆಕಾಶ್​ ದೂರಿದ್ದಾರೆ.

ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಮಗ ಕಾಣೆಯಾಗಿ ಮೂರು ದಿನಗಳು ಕಳೆದರೂ ಸಹ ಪೊಲೀಸರು ಮಗನನ್ನು ಹುಡುಕಿಕೊಡಲು ಆಸಕ್ತಿ ತೋರುತ್ತಿಲ್ಲ ಎಂದು ಕಾಣೆಯಾದ ಯುವಕನ ತಾಯಿ ಆರೋಪಿಸಿದ್ದಾರೆ. ಆದಷ್ಟು ಬೇಗ ತನ್ನ ಮಗನನ್ನು ಹುಡುಕಿಕೊಡಿ ಎಂದು ತಾಯಿ ಮನವಿ ಮಾಡಿದ್ದಾರೆ.

ABOUT THE AUTHOR

...view details