ಕಲಬುರಗಿ: ಬಿಸಿಲನಾಡು ಕಲಬುರಗಿಯಲ್ಲಿ ಚುನಾವಣೆಯ ಕಾವು ಜೋರಾಗಿದೆ. ಮತದಾರರ ಓಲೈಕೆಗೆ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಅಂತೆಯೆ, ಕಾಂಗ್ರೆಸ್ ನಾಯಕನ ಸಮಾಧಿಗೆ, ಬಿಜೆಪಿ ಅಭ್ಯರ್ಥಿ ಭೇಟಿ ನೀಡಿ ಅಲ್ಪಸಂಖ್ಯಾತರ ಮತ ಸೆಳೆಯಲು ಮುಂದಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
ಕಾಂಗ್ರೆಸ್ ಹಿರಿಯ ಮುಖಂಡ, ಅಲ್ಪಸಂಖ್ಯಾತರ ನಾಯಕರಾಗಿದ್ದ ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಅವರ ಸಮಾಧಿಗೆ ಬಿಜೆಪಿ ಲೋಕಸಭೆ ಅಭ್ಯರ್ಥಿ ಉಮೇಶ ಜಾಧವ್ ಭೇಟಿ ನೀಡಿದರು. ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಜಾಧವ್ ಈ ಕೆಲಸ ಮಾಡಿದ್ದಾರೆ ಎಂಬ ಮಾತುಗಳು ಈಗ ಕೇಳಿಬರುತ್ತಿವೆ.
ಖಮರುಲ್ ಇಸ್ಲಾಂ ಸಮಾಧಿಗೆ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಭೇಟಿ ಕಲಬುರಗಿ ಜಿಲ್ಲಾ ನ್ಯಾಯಾಲಯದ ಹಿಂದಿರುವ ಮುಸ್ಲಿಂ ಖಬರಿಸ್ತಾನದಲ್ಲಿ ದಿ. ಖಮರುಲ್ ಇಸ್ಲಾಂ ಅವರ ಸಮಾಧಿ ಇದೆ. ಜಾಧವ್ ಅಲ್ಪಸಂಖ್ಯಾತ ಬೆಂಬಲಿಗರೊಂದಿಗೆ ಸಮಾಧಿ ಬಳಿಗೆ ತೆರಳಿ, ಪುಷ್ಪ ನಮನ ಸಲ್ಲಿಸಿದರು. ಇಲ್ಲಿವರೆಗೆ ಬಾರದ ಖಮರುಲ್ರ ನೆನಪು ಚುನಾವಣೆ ಸನಿಹದಲ್ಲಿ ಬಂದಿದ್ಯಾಕೆ? ಈ ಮೂಲಕ ಅಲ್ಪಸಂಖ್ಯಾತರರಿಗೆ ಜಾಧವ್ ನೀಡುವ ಕೊಡುಗೆಯಾದ್ರೂ ಏನು? ಎಂಬುದು ಅಲ್ಪಸಂಖ್ಯಾತರ ಪ್ರಶ್ನೆಯಾಗಿದೆ.
ಚುನಾವಣೆ ಸಂದರ್ಭದಲ್ಲಿ ಜಾಧವ್ ರಾಜಕೀಯ ಗಿಮಿಕ್ ಮಾಡಲು ಮುಂದಾಗಿದ್ದಾರೆ. ಸದ್ಯ ಖಮರುಲ್ ಇಸ್ಲಾಂ ಅವರ ಪತ್ನಿ ಖನ್ನಿಸಾ ಫಾತಿಮಾ ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. ತಮ್ಮ ಸಂಪೂರ್ಣ ಬೆಂಬಲ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೇ ಇರಲಿದೆ ಎಂದು ಘೋಷಿಸಿದ್ದಾರೆ. ಆದರೆ, ಕೆಲವರು ಖರ್ಗೆ ಆಡಳಿತಾವಧಿಯಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಕೊಡುಗೆ ಸಿಕ್ಕಿಲ್ಲ. ಹೀಗಿರುವಾಗ ಅವರಿಗೆ ಮತ ನೀಡುವುದರಲ್ಲಿ ಅರ್ಥವಿಲ್ಲ. ಬದಲಾವಣೆಗಾಗಿ ಜಾಧವ್ ಅವರಿಗೆ ಮತ ನೀಡುತ್ತೇವೆ ಎಂದೂ ಹೇಳುತ್ತಿದ್ದಾರೆ.
ಈ ಬಗ್ಗೆ ಉಮೇಶ ಜಾಧವ ಮಾತನಾಡಿ, ಖಮರುಲ್ ಇಸ್ಲಾಂ ಅವರೊಂದಿಗೆ ಉತ್ತಮ ಒಡನಾಟವಿತ್ತು. ಅವರ ನಿಧನರಾಗುವ 15 ದಿನಗಳಿಗೆ ಮುನ್ನ ನನ್ನ ರಾಜಕೀಯ ನಡೆಯ ಬಗ್ಗೆ ಅವರಿಗಿದ್ದ ಆಸೆಯಂತೆ ಇದೀಗ ನಡೆದುಕೊಳ್ಳುತ್ತಿದ್ದೇನೆ. ಅದಕ್ಕಾಗಿ ಅವರ ಆಶೀರ್ವಾದ ಪಡೆಯಲು ಬಂದೆ ಎಂದು ತಿಳಿಸಿದ್ದಾರೆ. ಜಾಧವ್ ಅವರ ಈ ನಡೆ ಈಗ ಎಲ್ಲರ ಕೇಂದ್ರ ಬಿಂದುವಾಗಿದೆ. ವಿರೋಧಿಗಳು ಇದೊಂದು ರಾಜಕೀಯ ಗಿಮಿಕ್ ಎಂದರೆ, ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ.