ಕಲಬುರಗಿ:ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡದಿರುವುದೇ ಲೇಸು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜರಿದಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್ಡಿಕೆ ಯಾವಾಗ ಏನು ಮಾತನಾಡುತ್ತಾರೆ ಅನ್ನೋದು ಅವರಿಗೇ ಗೊತ್ತಾಗುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಸಹಕಾರ ನೀಡಿಲ್ಲ ಎಂದು ಹೆಚ್ಡಿಕೆ ಆರೋಪಿಸುತ್ತಿದ್ದಾರೆ. ಸರ್ಕಾರ ಬಿದ್ದ ನಂತರ ಯಾವ ಕಾರಣಕ್ಕೂ ಯಡಿಯೂರಪ್ಪ ಸರ್ಕಾರ ಬೀಳಿಸಲು ಬಿಡುವುದಿಲ್ಲ ಎಂದು ಹೇಳಿದ್ದರು. ಈಗ ಅವರು ಸರ್ಕಾರ ಬೀಳಿಸುತ್ತೇನೆ ಎನ್ನುತ್ತಿದ್ದಾರೆ. ಹೀಗಾಗಿ ಅವರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು ಎಂದರು.
ಇನ್ನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಸಚಿವರಾದವರೆಲ್ಲಾ ನಮ್ಮ ಆಪ್ತರಲ್ಲ. ಅವರೆಲ್ಲ ನಮ್ಮ ಸ್ನೇಹಿತರಾಗಿದ್ದರೆ ಪಕ್ಷ ತೊರೆಯುತ್ತಿರಲಿಲ್ಲ. ಅವರ ನಿಜವಾದ ಬಣ್ಣ ಈಗ ಬಯಲಾಗಿದೆ ಎಂದು ಸಿದ್ದರಾಮಯ್ಯ ಅವರು ನೂತನ ಸಚಿವರ ವಿರುದ್ಧ ಕಿಡಿಕಾರಿದರು.
ಪಕ್ಷದಲ್ಲಿ ಆತ್ಮೀಯರ ರೀತಿಯಲ್ಲಿ ನಟನೆ ಮಾಡುತ್ತಿದ್ದವರ ಬಣ್ಣ ಬಯಲಾಗಿದೆ. ಅವರು ಚುನಾವಣೆಯಲ್ಲಿ ಗೆದ್ದು ಸಚಿವರಾಗಿರಬಹುದು. ಆದರೆ ಅವರೆಲ್ಲರೂ ಈಗ ಪಕ್ಷಾಂತರಿಗಳು ಎಂದು ಜರಿದರು.
ಯಡಿಯೂರಪ್ಪ ಅತ್ಯಂತ ದುರ್ಬಲ ಮುಖ್ಯಮಂತ್ರಿ. ಪ್ರಧಾನಿ ಮೋದಿ ಬಿಡಿ, ಕೇಂದ್ರ ಸಚಿವ ಅಮಿತ್ ಶಾ ಬಳಿ ನೆರೆ ಪರಿಹಾರಕ್ಕೆ ಹಣ ಕೇಳುವ ಧೈರ್ಯವಿಲ್ಲ. ಇದೀಗ ಮುಂದಿನ ತಿಂಗಳು 5ರಂದು ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ. ಆದರೆ ತೆರಿಗೆ ಸಂಗ್ರಹ ಸರಿಯಾಗಿ ಆಗಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಷೇರು ಸಹ ಬಂದಿಲ್ಲ. ಅವರ ಬಳಿ ಶಾಸಕರಿಗೆ ಅನುದಾನ ಕೊಡಲೂ ಹಣವಿಲ್ಲ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಬಜೆಟ್ ಮಂಡಿಸುತ್ತಿದ್ದಾರೆ. ರಾಜ್ಯ ಇದುವರೆಗೂ ಇಂತಹ ದುರ್ಬಲ ಮುಖ್ಯಮಂತ್ರಿಯನ್ನು ಕಂಡಿರಲಿಲ್ಲ ಎಂದು ಬಿಎಸ್ವೈ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರ ಮೂರುವರೆ ವರ್ಷ ಇರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಈಗಾಗಲೇ ಅವರಲ್ಲಿ ಅಪಸ್ವರ ಎದ್ದಿದೆ. ಪಕ್ಷದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಯಾವಾಗ ಸ್ಫೋಟ ಆಗುತ್ತದೆಯೋ ಗೊತ್ತಿಲ್ಲ. ಕಳೆದ ಬಜೆಟ್ನಲ್ಲಿ ಹೇಳಿದಂತೆ ನಡೆಯಲಿಲ್ಲ. ಈ ಬಾರಿಯೂ ಬಜೆಟ್ ಘೋಷಣೆ ಕೇವಲ ದಾಖಲೆಗೆ ಸೀಮಿತ. ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿರುವುದು ಹೊಸದಲ್ಲ ಎಂದು ಕಿಡಿಕಾರಿದರು.