ಕಲಬುರಗಿ:ನಗರದ ಜಿಮ್ಸ್ ಕೋವಿಡ್ ವಾರ್ಡ್ನಲ್ಲಿ ನಡೆದಿದ್ದ ಅತ್ಯಾಚಾರ ಯತ್ನ ಪ್ರಕರಣದ ಸಂತ್ರಸ್ತೆ ಉಸಿರು ಚೆಲ್ಲಿದ್ದು, ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸ್ಥಳೀಯ ಹೋರಾಟಗಾರ ಶರಣಬಸಪ್ಪ ಮಮ್ಮಶೆಟ್ಟಿ ಆಗ್ರಹಿಸಿದ್ದಾರೆ.
ಅತ್ಯಾಚಾರ ಯತ್ನ ಪ್ರಕರಣದ ಸಂತ್ರಸ್ತೆ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹ ಘಟನೆ ನಡೆದು ಹತ್ತು ದಿನಗಳಾದರೂ ಯಾರೊಬ್ಬರ ಮೇಲೂ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಜನವಾದಿ ಮಹಿಳಾ ಸಂಘಟನೆ ಮುಖ್ಯಸ್ಥೆ ಕೆ.ನೀಲಾ ನೇತೃತ್ವದಲ್ಲಿ ಜಿಮ್ಸ್ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಯಿತು.
ಕಾಮುಕನ ಅಟ್ಟಹಾಸದಿಂದ ನಲುಗಿದ್ದ ಯುವತಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ. ದುಷ್ಕೃತ್ಯವೆಸಗಿದ್ದ ಕಾಮುಕ ಈಗ ಕಂಬಿ ಎಣಿಸುತ್ತಿದ್ದಾನೆ. ಆದರೆ, ಜಿಮ್ಸ್ ಆಸ್ಪತ್ರೆಯಲ್ಲಿ ಸೂಕ್ತ ರಕ್ಷಣೆ ಇಲ್ಲದ ಕಾರಣ ಈ ರೀತಿ ಹೀನ ಕೃತ್ಯ ನಡೆದಿದೆ. ಜಿಮ್ಸ್ ಆಡಳಿತ ಮಂಡಳಿ ಅಧಿಕಾರಿ ನಿರ್ಲಕ್ಷ್ಯ ಧೋರಣೆಯೇ ಇದಕ್ಕೆಲ್ಲಾ ಮುಖ್ಯ ಕಾರಣ ಎಂದು ಆರೋಪಿಸಿದರು.
ಘಟನೆ ನಡೆದು ಹತ್ತು ದಿನ ಕಳೆದರೂ ಸಹ ಜಿಲ್ಲಾಧಿಕಾರಿಯಾಗಲಿ ಅಥವಾ ಜಿಮ್ಸ್ ಆಡಳಿತ ಅಧಿಕಾರಿಯಾಗಲಿ ಈ ಕುರಿತು ಮಾತನಾಡದಿರುವುದು ಖಂಡನಾರ್ಹ. ಜಿಮ್ಸ್ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದೊಂದು ಜಿಲ್ಲಾಡಳಿತವೇ ತಲೆತಗ್ಗಿಸುವಂತಹ ಘಟನೆ. ಜಿಲ್ಲಾಡಳಿತ ಕೂಡಲೇ ಮಧ್ಯಸ್ಥಿಕೆ ವಹಿಸಿ, ಮೃತ ಸಂತ್ರಸ್ತೆಯ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕಲಬುರಗಿಯ ಕೋವಿಡ್ ವಾರ್ಡ್ನಲ್ಲಿ ಅತ್ಯಾಚಾರ ಯತ್ನ ಪ್ರಕರಣ: ಚಿಕಿತ್ಸೆ ಫಲಿಸದೆ ಯುವತಿ ಸಾವು