ಸೇಡಂ :ಯುವಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ ಹಿನ್ನೆಲೆ ಮುಧೋಳ ಪಿಐ ಆನಂದರಾವ್ ಅವರನ್ನು ಅಮಾನತು ಮಾಡಲಾಗಿದೆ.
ಯುವಕನ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿರುವುದು.. ಯುವಕ ರಾಘವೇಂದ್ರ ರವಿ ಅನಂತಯ್ಯ ಎಂಬಾತನ ಮೇಲೆ ಗ್ರಾಮದ ಸಂದಪ್ಪ ಹಾಗೂ ಸಹಚರರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜರುಗಿತ್ತು. ಘಟನೆ ಸಂಬಂಧ ಗಾಯಗೊಂಡ ಯುವಕ ನೀಡಿದ್ದ ದೂರನ್ನ ಮುಧೋಳ ಪಿಐ ಆನಂದರಾವ್ ಪಡೆಯದೇ ಇರುವುದರಿಂದಲೇ ಹಲ್ಲೆ ನಡೆದಿರುವುದಾಗಿ ಕಾಂಗ್ರೆಸ್ ದೂರಿತ್ತು. ಅಷ್ಟೇ ಅಲ್ಲ, ಪಿಐ ತಲೆದಂಡಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟಿಸಿತ್ತು.
ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಪಿಐ ಅಮಾನತು ಮಾಡಿ ಆದೇಶಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ. ಶುಕ್ರವಾರ ಸಂಜೆಯೊಳಗೆ ಆರೋಪಿತರನ್ನು ಬಂಧಿಸಬೇಕು ಮತ್ತು ಪಿಐ ಅಮಾನತಿಗೆ ಆಗ್ರಹಿಸಿ, ಶರಣ ಪ್ರಕಾಶ ಪಾಟೀಲ್ ಮುಧೋಳ ಠಾಣೆಯಲ್ಲಿ ಮೌಖಿಕ ದೂರು ನೀಡಿದ್ದರು.
ಶನಿವಾರ ಮಧ್ಯಾಹ್ನದವರೆಗೆ ಗೃಹ ಮಂತ್ರಿಗಳು ಮತ್ತು ಎಸ್ಪಿ ಕರ್ತವ್ಯಲೋಪ ಎಸಗಿದ ಅಧಿಕಾರಿಯನ್ನು ಅಮಾನತು ಮಾಡುವ ಭರವಸೆ ನೀಡಿದ್ದರು. ಅದಕ್ಕಾಗಿ ತಾವು ಧರಣಿ ಹಿಂಪಡೆದಿರುವುದಾಗಿ ಅವರು ತಿಳಿಸಿದ್ದಾರೆ. ಈ ಸಂಬಂಧ ಮುಧೋಳದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜಮಾಯಿಸಿ ಪೊಲೀಸ್ ಠಾಣೆ ಎದುರು ಧರಣಿಗೆ ಮುಂದಾಗಿದ್ದರು.
ಬಿಜೆಪಿಯಿಂದ ರಸ್ತೆ ತಡೆ :ಮುಧೋಳ ಪಿಐ ಆನಂದರಾವ್ ಅಮಾನತು ಖಂಡಿಸಿ ಇದಕ್ಕೆ ಕಾರಣರಾದ ಎಸ್ಪಿ ಮತ್ತು ಡಿಎಸ್ಪಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್ ನೇತೃತ್ವದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಡಿವೈಎಸ್ಪಿ ಬಸವೇಶ್ವರ, ಶಾಸಕರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಟೈರ್ಗೆ ಬೆಂಕಿ ಹಚ್ಚಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರ ಎರಡು ಗಂಟೆಗಳಿಂದ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿತ್ತು. ಈ ವೇಳೆ ಅಧಿಕಾರಿಗಳ ಮೇಲೆ ಡಾ. ಶರಣಪ್ರಕಾಶ ಪಾಟೀಲ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದೇ ವೇಳೆ ಡಿವೈಎಸ್ಪಿ ಬಸವೇಶ್ವರ ಮತ್ತು ಶಾಸಕರು ಹಾಗೂ ಕಾರ್ಯಕರ್ತರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆದಿದೆ.