ಸೇಡಂ (ಕಲಬುರಗಿ):ಕೆಲ ದಿನಗಳ ಹಿಂದಷ್ಟೆ ಖಾಸಗಿ ಅಂಗಡಿಗಳಿಂದ ಕಳಪೆ ಗುಣಮಟ್ಟದ ಹೆಸರು ಮತ್ತು ಉದ್ದು ಖರೀದಿಸಿ ಕೈಸುಟ್ಟುಕೊಂಡಿದ್ದ ರೈತರು ಈಗ ಸರ್ಕಾರ ವಿತರಿಸಿದ ಬೀಜ ಖರೀದಿಸಿ ಕಂಗಾಲಾಗಿದ್ದಾರೆ.
ರೈತ ಸಂಪರ್ಕ ಕೇಂದ್ರದಲ್ಲಿ ಕಳಪೆ ಬೀಜ ವಿತರಣೆ: ರೈತರ ಆಕ್ರೋಶ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ವಿತರಣೆ ಮಾಡಲಾಗುತ್ತಿರುವ ಕಡಲೆ ಬೀಜ ತುಂಬಿರುವ ಬಹುತೇಕ ಚೀಲಗಳಲ್ಲಿ ಹುಳುಗಳು ಕಾಣಿಸಿಕೊಂಡಿದ್ದು, ಭಾಗಶಃ ಬೀಜ ನಾಶವಾಗಿದೆ. ಇದರಿಂದ ಕಂಗಾಲಾದ ರೈತರು ರೈತ ಸಂಪರ್ಕ ಕೇಂದ್ರದೆದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಚೀಲಗಳನ್ನು ಹೊತ್ತು ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
'ಕೆಲ ದಿನಗಳ ಹಿಂದಷ್ಟೇ ಉತ್ತಮ ಗುಣಮಟ್ಟದ ಬೀಜ ಎಂದು ಕೆಲ ಅಂಗಡಿಯವರು ಮಾರಾಟ ಮಾಡಿದ ಉದ್ದು, ಹೆಸರು ಬೀಜ ಖರೀದಿಸಿ ನೂರಾರು ಎಕರೆಯಲ್ಲಿ ಬಿತ್ತಿ ನಷ್ಟ ಅನುಭವಿಸಿದ್ದೇವೆ. ಈಗ ಅಂತಹ ಗೋಜಿಗೆ ಸಿಲುಕದೆ ನೇರವಾಗಿ ಸರ್ಕಾರ ವಿತರಿಸುವ ಬಿತ್ತನೆ ಬೀಜವನ್ನು ನಂಬಿ ಬಂದರೆ ಇಲ್ಲೂ ಸಹ ಹುಳ ತಿಂದ ಬೀಜ ನೀಡಲಾಗುತ್ತಿದೆ. ಹೀಗೆ ಮುಂದುವರೆದರೆ ನಾವು ಜೀವನ ನಡೆಸುವುದಾದರೂ ಹೇಗೆ?' ಎಂದು ಬೀರನಹಳ್ಳಿಯ ರೈತ ಅಬ್ದುಲ್ ಖಾದರ ಜಿಲಾನಿ ಅಳಲು ತೋಡಿಕೊಂಡಿದ್ದಾರೆ.
'ಐದಾರು ಸಾವಿರ ರೂ. ನೀಡಿ ಬಿತ್ತನೆ ಬೀಜ ಖರೀದಿ ಮಾಡಿದ್ದೇವೆ. ಕಳೆದ ಬಾರಿ ಉದ್ದು, ಹೆಸರು ಖರೀದಿಸಿ ನಷ್ಟ ಅನುಭವಿಸಿದ್ದೇವೆ. ಸರ್ಕಾರ ಪರಿಹಾರ ನೀಡುವುದಾಗಿ ಕೈ ತೊಳೆದುಕೊಂಡಿದೆ. ಈಗ ಮತ್ತೆ ನಮಗೆ ಸಂಕಷ್ಟ ಎದುರಾಗಿದೆ. ಕಡಲೆ ಬೀಜ ಬಿತ್ತಲು ಇದು ಸರಿಯಾದ ಸಮಯ. ಆದರೆ ಹುಳ ತಿಂದ ಬೀಜ ಬಿತ್ತಿದರೆ ಬೆಳೆಯಾದರೂ ಹೇಗೆ ಬೆಳೆಯಲು ಸಾಧ್ಯ?' ಎಂದು ಮೀನಹಾಬಾಳ ಗ್ರಾಮದ ರೈತ ಶಿವಶರಣಪ್ಪ ಆಕ್ರೋಶ ವ್ಯಕ್ತಪಡಿಸಿದರು.