ಕಲಬುರಗಿ:ಸರ್ಕಾರಿ ಶಾಲಾ ಮಕ್ಕಳಿಗೆ ಸೇರಬೇಕಾದ 'ಮಧ್ಯಾಹ್ನದ ಬಿಸಿಯೂಟ ಯೋಜನೆ'ಯ ಹಣ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಫಲಾನುಭವಿ ಮಕ್ಕಳಿಗೆ ತಲುಪಿಲ್ಲ. ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳು ಈ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಕೋವಿಡ್ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಹಾಗಾಗಿ ಸರ್ಕಾರ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ಮಿಡ್ ಡೇ ಮೀಲ್ ಹಣವನ್ನು ನೇರವಾಗಿ ಮಕ್ಕಳಿಗೆ ನೀಡಲು ನಿರ್ಧರಿಸಿ ಹಣ ಬಿಡುಗಡೆ ಮಾಡಿತ್ತು. ಆದರೆ ಕಲಬುರಗಿ ಜಿಲ್ಲೆಯಲ್ಲಿ ಬಿಡುಗಡೆ ಆಗಿರುವ 7 ಕೋಟಿ 63 ಲಕ್ಷಕ್ಕೂ ಅಧಿಕ ಹಣ ಮಾತ್ರ ಇನ್ನೂ ಮಕ್ಕಳಿಗೆ ಸೇರಿಲ್ಲ.
ಹಣ ಬಿಡುಗಡೆಯಾಗಿ ಆರು ತಿಂಗಳಾದರೂ ಮಕ್ಕಳಿಗೆ ಹಣ ಪಾವತಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಹಣ ದುರುಪಯೋಗ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೇ ಮಕ್ಕಳಿಗೆ ಹಣ ಪಾವತಿಸುವಂತೆ ಜನಪರ ಹೋರಾಟಗಾರ ಮಲ್ಲಿಕಾರ್ಜುನ ಸಾರವಾಡ ಆಗ್ರಹಿಸಿದ್ದಾರೆ.
2021ನೇ ಸಾಲಿನ ಮೇ ಮತ್ತು ಜೂನ್ ತಿಂಗಳಲ್ಲಿ ಕೋವಿಡ್ ಹಾವಳಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಿದ್ದ 50 ದಿನಗಳ ಅಡುಗೆ ತಯಾರಿಕಾ ವೆಚ್ಚದ ಹಣ ಅರ್ಹ 1 ರಿಂದ 8ನೇ ತರಗತಿಯ ಮಕ್ಕಳಿಗೆ ನೇರವಾಗಿ ಅಕೌಂಟ್ ಮೂಲಕ ಸೇರಬೇಕಿತ್ತು. ಕಲಬುರಗಿ ಜಿಲ್ಲೆಯಲ್ಲಿ ಸುಮಾರು ಎರಡುವರೆ ಲಕ್ಷಕ್ಕೂ ಅಧಿಕ ಸರ್ಕಾರಿ ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಹಣದಿಂದ ವಂಚಿತರಾಗಿದ್ದಾರೆ ಎನ್ನಲಾಗ್ತಿದೆ.
ಕೆಲ ತಾಂತ್ರಿಕ ಸಮಸ್ಯೆಗಳಿಂದ ಮಕ್ಕಳಿಗೆ ಹಣ ಪಾವತಿ ಮಾಡಲು ಆಗಿಲ್ಲ. ಆದಷ್ಟು ಶೀಘ್ರ ನೇರವಾಗಿ ಮಕ್ಕಳು ಅಥವಾ ಮಕ್ಕಳ ಪೋಷಕರಿಗೆ ನಗದು ಹಣ ಪಾವತಿಸಲು ಕ್ರಮ ಕೈಗೊಳುವುದಾಗಿ ಅಕ್ಷರ ದಾಸೋಹ ಅಧಿಕಾರಿ ಭರತರಾಜ್ ಸಾವಳಗಿ ಭರವಸೆ ನೀಡಿದ್ದಾರೆ.