ಕಲಬುರಗಿ: 7.5 ಲಕ್ಷ ರೂಪಾಯಿ ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಂಕ್ರಣ್ಣ ವಣಿಕ್ಯಾಳ ಹಾಗೂ ಪಾಲಿಕೆ ಲೆಕ್ಕಾಧಿಕಾರಿ ಚೆನ್ನಪ್ಪ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೊರೊನಾ ಸುರಕ್ಷಾ ಚಕ್ರದ ಬಿಲ್ ಪಾಸ್ ಮಾಡುವ ಸಲುವಾಗಿ 2% ಕಮಿಷನ್ ನೀಡುವಂತೆ ಪಾಲಿಕೆ ಆಯುಕ್ತ ವಣಕ್ಯಾಳ ಬೇಡಿಕೆ ಇಟ್ಟಿದ್ದರಂತೆ. ಈ ಹಿನ್ನೆಲೆ ಕೊರೊನಾ ಸುರಕ್ಷಾ ಚಕ್ರದ ನಿರ್ದೇಶಕ ಶರಣ ಎಂಬುವರು ಎಸಿಬಿಗೆ ದೂರು ನೀಡಿದ್ದು, ಎಸಿಬಿ ಅಧಿಕಾರಿಗಳು ಬಲೆ ಹಾಕಿದ್ದಾರೆ.
ಒಟ್ಟು 7.5 ಲಕ್ಷ ರೂ. ಬಿಲ್ ಪಾಸ್ ಮಾಡಲು 2% ಪ್ರತಿಶತದಂತೆ 14,500 ರೂ. ಲಂಚ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಪಾಲಿಕೆ ಅಕೌಂಟೆಂಟ್ ಚೆನ್ನಪ್ಪನನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ನಂತರ ಎಸಿಬಿ ಅಧಿಕಾರಿಗಳ ಮುಂದೆ ಪಾಲಿಕೆ ಆಯುಕ್ತ ಶಂಕ್ರಣ್ಣ ವಣಿಕ್ಯಾಳಗೆ ಕರೆ ಮಾಡಿದ ಲೆಕ್ಕಾಧಿಕಾರಿ, ಹಣ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ವೇಳೆ ಹಣ ಮನೆಗೆ ತೆಗೆದುಕೊಂಡು ಬರುವಂತೆ ಚನ್ನಪ್ಪನಿಗೆ ಆಯುಕ್ತ ವಣಿಕ್ಯಾಳ ಹೇಳಿದ್ದಾರೆ ಎನ್ನಲಾಗ್ತಿದೆ.