ಕಲಬುರಗಿ: ಹರಿಯುತ್ತಿದ್ದ ಮಳೆ ನೀರಿನಲ್ಲಿ ಬೈಕ್ ಸವಾರರಿಬ್ಬರು ಕೊಚ್ಚಿಕೊಂಡು ಹೋದ ಘಟನೆ ಕಲಬುರಗಿ ತಾಲೂಕಿನ ಭೀಮಳ್ಳಿ ಬಳಿ ನಡೆದಿದೆ.
ಮಳೆ ನೀರಲ್ಲಿ ಕೊಚ್ಚಿ ಹೋದ ಬಾಲಕ... ಸ್ಥಳೀಯರಿಂದ ಯುವಕ ಬಚಾವ್! - ಮಳೆ ನೀರಿಗೆ ಕೊಚ್ಚಿಹೋದ ಬಾಲಕ
ಮಳೆ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರಲ್ಲಿ ಸ್ಥಳೀಯರು ಓರ್ವನನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಇನ್ನೋರ್ವ ಬಾಲಕನಿಗಾಗಿ ಶೋಧ ಕಾರ್ಯ ನಡೆದಿದೆ.
ಮಳೆ ನೀರಿನಿಂದ ತುಂಬಿ ತುಳುಕುತ್ತಿರುವ ಬೋಸಗಾ ಕೆರೆ ವೀಕ್ಷಿಸಲು ಹೋಗಿದ್ದ ಡಬರಾಬಾದ್ ಗ್ರಾಮದ 22 ವರ್ಷದ ಯುವಕ ವಿಶ್ವರಾಧ್ಯ ಮತ್ತು 12 ವರ್ಷದ ಬಾಲಕ ಬೈಕ್ ಮೇಲೆ ವಾಪಸ್ ಮರಳುತ್ತಿದ್ದರು. ಧಾರಾಕಾರ ಮಳೆಗೆ ಭೀಮಳ್ಳಿ ಬಳಿಯ ಹಳ್ಳದ ಸೇತುವೆ ತುಂಬಿ ಹರಿಯುತ್ತಿದ್ರು, ಹಳ್ಳ ದಾಟಲು ಹೋದಾಗ ನೀರಿನ ರಭಸಕ್ಕೆ ಸವಾರರಿಬ್ಬರು ಕೊಚ್ಚಿ ಹೋಗಿದ್ದರು.
ಆದ್ರೆ ವಿಶ್ವರಾಧ್ಯ ಎನ್ನುವ ಯುವಕ ಸ್ಥಳೀಯರ ಸಹಾಯದೊಂದಿಗೆ ಈಜಿ ದಡ ಸೇರಿ ಬಚಾವ್ ಆಗಿದ್ದಾನೆ. ಆದ್ರೆ 12 ವರ್ಷದ ಬಾಲಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಕಲಬುರಗಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿರುವ ಬಾಲಕನ ಶೋಧ ಕಾರ್ಯಕ್ಕೆ ಕತ್ತಲು ಅಡ್ಡಿಯಾಗಿದ್ದು, ಬೆಳಿಗ್ಗೆ ಬೋಟ್ ಮೂಲಕ ಅಗ್ನಿ ಶಾಮಕದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಲಿದೆ.