ಕಲಬುರಗಿ: ಅವರೆಲ್ಲ ವೀಕೆಂಡ್ ಎಂಜಾಯ್ ಮಾಡಲು ಹೈದರಾಬಾದ್ನಿಂದ ಗೋವಾಕ್ಕೆ ತೆರಳಿದ್ದರು. ಸಮುದ್ರ ದಡದಲ್ಲಿ ಮಜಾ ಮಾಡಿ, ಮರಳಿ ಬರುವಾಗ ವಿವಾಹ ವಾರ್ಷಿಕೋತ್ಸವ ಹಾಗೂ ಎರಡು ಮಕ್ಕಳ ಬರ್ತ್ಡೇ ಕೂಡ ಆಚರಿಸಿದರು. ಇನ್ನೇನು ಖುಷಿ ಖುಷಿಯಿಂದ ಊರಿನತ್ತ ಹೋರಟವರು ಮಾರ್ಗ ಮಧ್ಯೆ ವಿಧಿಯ ಕ್ರೂರ ಆಟಕ್ಕೆ ಮಸಣ ಸೇರಿದ್ದಾರೆ.
ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ಬೆಳ್ಳಂ ಬೆಳಗ್ಗೆ 6 ಗಂಟೆ ಸುಮಾರಿಗೆ ನಡೆದ ಅಪಘಾತದ ಭೀಕರ ದೃಶ್ಯಗಳು ಕರುಳು ಕಿತ್ತು ಬರುವಂತಿವೆ. ಗೋವಾದಿಂದ ಹೈದರಾಬಾದ್ಗೆ ಹೊರಟಿದ್ದ ಆರೆಂಜ್ ಟೂರ್ಸ್ ಅಂಡ್ ಟ್ರಾವೆಲ್ಸ್ನ ಖಾಸಗಿ ಬಸ್ ಮತ್ತು ಹುಮನಾಬಾದ್ ಕಡೆಯಿಂದ ಕಲಬುರಗಿಯತ್ತ ಬರುತ್ತಿದ್ದ ಗೂಡ್ಸ್ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಸುಮಾರು 100-150 ಅಡಿ ದೂರದ ವರೆಗೂ ಸಾಗಿರೋ ಬಸ್, ರಸ್ತೆಯಲ್ಲಿದ್ದ ಬ್ರಿಡ್ಜ್‌ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ.
28 ಜನ ಬಚಾವ್: ಅಪಘಾತ ಸಂಭವಿಸಿದ ನಂತರ ಕಂದಕಕ್ಕೆ ಉರುಳಿದ್ದ ಬಸ್ಗೆ ಸ್ವಲ್ಪ ಸಮಯದ ನಂತರ ಬೆಂಕಿ ತಗುಲಿ ಹೊತ್ತಿ ಉರಿದಿದೆ. ನೋಡು ನೋಡುತ್ತಿದ್ದಂತೆ ಬಸ್ ಅಸ್ಥಿ ಪಂಜರದಂತಾಗಿದೆ. ಈ ವೇಳೆ ಒಂದು ಕುಟುಂಬದ 21 ಜನರು, ಇನ್ನೊಂದು ಕುಟುಂಬದ 11 ಜನರು, ಚಾಲಕ, ಇಬ್ಬರು ಕ್ಲೀನರ್ ಸೇರಿ 35 ಜನ ಬಸ್‌ನಲ್ಲಿದ್ದರು. ಸುಖ ನಿದ್ರೆಯಲ್ಲಿದ್ದವರಿಗೆ ಸಿಡಿಲು ಅಪ್ಪಳಿಸಿದಂತಾಗಿ ಬಸ್ನ ಅಡಿಯಿಂದ ತೂರಿಕೊಂಡು ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನೂ ಏಳು ಜನರು ಬಸ್ನಲ್ಲಿ ಇರುವಾಗಲೇ ಬೆಂಕಿ ತಗುಲಿ ಸಜೀವ ದಹನವಾಗಿದ್ದಾರೆ. ಸಿಕಂದರಾಬಾದ್ ನಿವಾಸಿಗಳಾದ ಇಂಜಿನಿಯರ್ ಅರ್ಜುನಕುಮಾರ (37), ಅವರ ಪತ್ನಿ ಸರಳಾದೇವಿ(32), ಪುತ್ರ ಬಿವಾನ್ (4), ದೀಕ್ಷಿತ್ (9), ಅನಿತಾ ರಾಜು (40), ಶಿವಕುಮಾರ (35) ಮತ್ತು ಇವರ ಪತ್ನಿ ರವಾಲಿ (30) ಬೆಂಕಿಗಾಹುತಿಯಾದ ದುರ್ದೈವಿಗಳು.
ಕೊನೆಯ ವಿವಾಹ ವಾರ್ಷಿಕೋತ್ಸವ ಆಚರಣೆ: ಇಂಜಿನಿಯರ್ ಅರ್ಜುನ್ ಕುಟುಂಬಸ್ಥರು ಮತ್ತು ಕುಟುಂಬ ಸ್ನೇಹಿತರು ಸೇರಿ ವೀಕೆಂಡ್ ಮಸ್ತಿಗಾಗಿ ಮೇ 29 ರಂದು ಗೋವಾಕ್ಕೆ ತೆರಳಿದ್ದರು. ನಾಲ್ಕು ದಿನ ಎಂಜಾಯ್ ಮಾಡಿ ಗುರುವಾರ ಮರಳುವ ಮುನ್ನ ಅರ್ಜುನ್ ದಂಪತಿ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಂಡಿದ್ದಾರೆ. ಅಲ್ಲದೇ, 4 ವರ್ಷದ ಮಗನ ಬರ್ತ್ಡೇ ಆಚರಣೆ ಕೂಡ ಮಾಡಿದ್ದಾರೆ. ಘಟನೆಯಿಂದ ಬದುಕುಳಿದ ಗಾಯಾಳುಗಳನ್ನ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವರಿಗೆ ಸಣ್ಣಪುಟ್ಟ ಸುಟ್ಟಗಾಯಗಳಾಗಿದ್ದರೆ ಕೆಲವರಿಗೆ ಗಂಭೀರ ಗಾಯಗಳಾಗಿವೆ.