ಕಲಬುರಗಿ: ಅಕ್ಟೋಬರ್ 27ರಂದು ಕಲಬುರಗಿ ಹೊರವಲಯದ ಸೇಡಂ ರಸ್ತೆಯ ಕಾಳನೂರು ಡಾಬಾ ಬಳಿ ನಡೆದ ಫಿಲ್ಟರ್ ಬೆಡ್ ನಿವಾಸಿ ಆಕಾಶ್ ಎಂಬಾತನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಠಾಣೆ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಶ್ರೀನಿಧಿ, ಈತನ ಸಹೋದರ ನಿಖಿಲ್, ಬಸವರಾಜ್ ಹಾಗೂ ವಿಜಯಕುಮಾರ್, ಪ್ರದೀಪ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಖರ್ಗೆ ಸರ್ಕಲ್ ಬಳಿ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಆಕಾಶ್, ಆರೋಪಿ ಶ್ರೀನಿಧಿಯ ಸಹೋದರಿಯನ್ನು ಪ್ರೀತಿಸುತ್ತಿದ್ದ. ಅಲ್ಲದೇ ಆಕೆಯನ್ನು ಕರೆದುಕೊಂಡು ಹೋಗಿ ಪುನಃ ಮನೆಗೆ ತಂದು ಬಿಟ್ಟಿದ್ದ. ಇದರಿಂದ ಕೆಂಡಾಮಂಡಲವಾಗಿದ್ದ ಶ್ರೀನಿಧಿ, ಅ. 27ರಂದು ಸಂಜೆ ಗ್ಯಾರೇಜ್‌ನಲ್ಲಿದ್ದ ಆಕಾಶ್‌ನನ್ನು ಬಲವಂತವಾಗಿ ಬೈಕ್ ಮೇಲೆ ಕಾಳನೂರು ಡಾಬಾ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದರು.