ಕಲಬುರಗಿ: ಮಲತಾಯಿಯೊಬ್ಬಳು ಹಸಿವು ಅಂತ ಊಟ ಕೇಳಿದ ತಬ್ಬಲಿ ಮಗುವಿನ ಕೈಗಳನ್ನ ಸುಟ್ಟು, ಮಂಚಕ್ಕೆ ಕಟ್ಟಿ ಚಿತ್ರಹಿಂಸೆ ನೀಡಿ ಕ್ರೌರ್ಯ ಮೆರೆದಿರುವ ಘಟನೆ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಾಡಿ ಪಟ್ಟಣದ ಕೂಗಳತೆ ದೂರದಲ್ಲಿರುವ ನಾಲವಾರ ಸ್ಟೇಷನ್ ತಾಂಡದಲ್ಲಿ ಇಂತಹದೊಂದು ಅಮಾನವೀಯ ಕೃತ್ಯ ವರದಿಯಾಗಿದೆ.
ತಾಂಡಾ ನಿವಾಸಿ ತಿಪ್ಪಣ್ಣಾ ಎಂಬುವರ ಹೆಂಡತಿ ಮೃತಪಟ್ಟಿದ್ದು, ನಾಲ್ಕು ವರ್ಷದ ಮಗುವಿನ ಆರೈಕೆಗೆ ಎಂದು ಇತ್ತೀಚಿಗೆ ಮರೆಮ್ಮ ಎಂಬ ಮಹಿಳೆಯನ್ನ ಆತ ಮದುವೆಯಾಗಿದ್ದ. ಮನೆಯಲ್ಲಿ ತಿಪ್ಪಣ್ಣಾ ಇರೋವರೆಗೆ ಮಲತಾಯಿ ಮರೆಮ್ಮ ಮಗುವನ್ನ ಸರಿಯಾಗಿ ನೋಡಿಕೊಳ್ಳುತ್ತಿದ್ದಳಂತೆ. ದುಡಿಯಲು ಅಂತ ತಿಪ್ಪಣ್ಣಾ ಮಹಾರಾಷ್ಟ್ರದ ಪುಣೆಗೆ ಹೋಗುತ್ತಿದ್ದಂತೆ. ಆಗ ಮರೆಮ್ಮ ಮಗುವಿನ ಮೇಲೆ ಈ ರೀತಿ ಕ್ರೌರ್ಯ ಮೆರೆದಿದ್ದಾಳೆ.
ನಿತ್ಯ ಮಗುವನ್ನು ಹೊಡೆಯುವುದು, ಹಿಂಸೆ ನೀಡುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಹಸಿವಿನಿಂದ ಬಳಲಿದ ಮಗು ಮಲತಾಯಿಗೆ ಊಟ ಕೇಳಿದೆ. ಊಟ ನೀಡುವ ಬದಲು ನಿರ್ದಯಿ ಮಲತಾಯಿ ಮರೆಮ್ಮ, ಮಗುವಿನ ಕೈಗಳ ಮೇಲೆ ಬರೆ ಎಳೆದಿದ್ದಾಳೆ. ಮಂಚಕ್ಕೆ ಕಟ್ಟಿ ಚಿತ್ರಹಿಂಸೆ ನೀಡಿದ್ದಾಳೆ ಎಂದು ತಿಳಿದು ಬಂದಿದೆ.