ಹುಬ್ಬಳ್ಳಿ: ಕೇಂದ್ರ ಸರ್ಕಾರ ಮೊದಲನೇ ಕಂತಿನಲ್ಲಿ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ಪ್ರಧಾನಮಂತ್ರಿ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಚೆನ್ನಮ್ಮ ವೃತ್ತದ ಬಳಿ ಏಕಾಂಗಿಯಾಗಿ ಮಲಗಿ ಪ್ರತಿಭಟನೆ ಮಾಡಿದರು.
ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್‌ನಲ್ಲಿ ಏಕಾಂಗಿಯಾಗಿ ಮಲಗಿದ ವಾಟಾಳ್ ನಾಗರಾಜ್.. - ಪ್ರಧಾನಿ ನರೇಂದ್ರ ಮೋದಿ
ಕೇಂದ್ರ ಸರ್ಕಾರ ಮೊದಲನೇ ಕಂತಿನಲ್ಲಿ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ಪ್ರಧಾನಮಂತ್ರಿ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವನ್ನು ಗುಲಾಮರ ರೀತಿಯಲ್ಲಿ ಕಾಣುತ್ತಿರುವ ಕೇಂದ್ರ ಸರ್ಕಾರ, ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕಾಗಿ ತಕ್ಷಣ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ಸಂಸದರು ಕೇಂದ್ರದಿಂದ ಹಣ ತರುವ ಕೆಲಸ ಮಾಡಬೇಕು. ಇಲ್ಲವೇ ರಾಜೀನಾಮೆ ಕೊಡಬೇಕು. ಈ ಹಿಂದೆಯೂ ಉತ್ತರ ಕರ್ನಾಟಕಕ್ಕೆ ಪರಿಹಾರ ಒದಗಿಸುವಲ್ಲಿ ಅನ್ಯಾಯವಾಗಿದೆ. ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿ ಪ್ರವಾಹದ ಪರಿಸ್ಥಿತಿ ಅರಿಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ರಾಜಕೀಯದಲ್ಲಿ ಪಕ್ಷಾಂತರ ಮಾಡಿ ನಂಬರ್ ಗೇಮ್ ಮಾಡುವುದು ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇ ಪಕ್ಷಾಂತರ ಮಾಡಿದರೂ ಅವರಿಗೆ ಜೀವಾವಧಿವರೆಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ನೀಡಬಾರದು. ಜೊತೆಗೆ ಪಕ್ಷಾಂತರ ಮಾಡಿದವರಿಗೆ ಕನಿಷ್ಠ ಐದು ವರ್ಷ ಜೈಲು ಶಿಕ್ಷೆ ನೀಡಬೇಕು. ಹೀಗೆ ಕಠಿಣ ಕಾನೂನು ಜಾರಿಗೊಳಿಸಿದರೆ ಮಾತ್ರ ಸುಧಾರಣೆಯಾಗುವುದು ಎಂದು ಕೆಲ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.