ಬೆಳಗಾವಿ: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ನಾಳೆ ಭಾರತ್ ಬಂದ್ ಬೆಂಬಲಿಸುವುದಾಗಿ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಲ್ಪ ಕಾಲಾವಕಾಶ ಸಿಕ್ಕಿದ್ರೆ ಇಡೀ ಉತ್ತರ ಕರ್ನಾಟಕವನ್ನು ಬಂದ್ ಮಾಡುತ್ತಿದ್ದೆವು. ಇದು ಕೇವಲ ರೈತರ ವಿಷಯ ಅಲ್ಲಾ, ಅನ್ನ ತಿನ್ನುವ ಎಲ್ಲರ ವಿಷಯವಾಗಿದೆ. ರೈತ ವಿರೋಧಿ, ಜನ ವಿರೋಧಿ ನೀತಿಯನ್ನು ನಾವು ಖಂಡಿಸುತ್ತೇವೆ. ನಾಳೆ ಬಂದ್ ಮೂಲಕ ವೈಚಾರಿಕ ಸಂಘರ್ಷಕ್ಕೆ ನಾವು ಇಳಿತಿದೀವಿ ಎಂದರು.
ಎಂ ಎಸ್ ಪಿ ಮುಂದುವರಿಯುತ್ತೆ ಅಂತ ಘೋಷಣೆ ಮಾಡ್ತಾರೆ. ದೆಹಲಿಯಲ್ಲಿದ್ದು ಘೋಷಣೆ ಮಾಡಿದ್ರೆ ರೈತರಿಗೆ ಬೆಂಬಲ ಬೆಲೆ ಸಿಗುತ್ತಾ? ಯಾರು ಖರೀದಿ ಮಾಡ್ತಾರೆ ಅದನ್ನ ಹೇಳ್ರಿ ಎಂದು ಕೇಂದ್ರ ಸರ್ಕಾರಕ್ಕೆ ಬಾಬಾಗೌಡ ಪಾಟೀಲ್ ಸವಾಲು ಹಾಕಿದರು.
ಈ ಕೃಷಿ ಮಸೂದೆಗಳಿಂದ ರೈತರು ಬದುಕೋದೇ ಇಲ್ಲ. ಬ್ರಿಟಿಷರ ಗುಲಾಮರಾಗಿದ್ದಕ್ಕಿಂತಲೂ ಕೀಳು ದರ್ಜೆ ಗುಲಾಮರಾಗಿ ಬದುಕೋ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಾರ್ಪೊರೇಟ್ ಕಂಪನಿಗಳ ಗುಲಾಮರಾಗಿ ಬದುಕುವ ಸ್ಥಿತಿ ಬರುತ್ತೆ. ಆ ಕಾರಣಕ್ಕೆ ಇದನ್ನು ಸಹಿಸಲು ಆಗಲ್ಲ, ಚಳವಳಿ ನಮಗೆ ಅನಿವಾರ್ಯ ಮಾರ್ಗವಾಗಿದೆ ಎಂದರು.
ಭಾರತ್ ಬಂದ್ಗೆ ಧಾರವಾಡ ಅಖಿಲ ಭಾರತ ರೈತ ಸಂಘರ್ಷ ಸಮಿತಿ ಬೆಂಬಲ..
ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಧರಣಿ ಬೆಂಬಲಿಸಿ ನಾಳೆ ಕರೆ ನೀಡಿದ 'ಭಾರತ ಬಂದ್'ಗೆ ಅಖಿಲ ಭಾರತ ರೈತ ಸಂಘರ್ಷ ಸಮಿತಿಯ ಧಾರವಾಡ ಘಟಕ ಬೆಂಬಲ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ನಡೆ ಖಂಡಿಸಿ ಡಿ.8 ರಂದು ಕರೆ ನೀಡಿದ ಭಾರತ ಬಂದ್ ಯಶಸ್ವಿಗೊಳಿಸಲು ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಮನವಿ ಮಾಡಿದೆ. ಈ ಚಳವಳಿಗೆ ವರ್ತಕರು, ಹೊಟೇಲ್ ಮಾಲೀಕರು, ಕಾರ್ಖಾನೆ ಮಾಲೀಕರ ಸಂಘ-ಸಂಸ್ಥೆಗಳು ಅಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಸ್ವಯಂ ಪ್ರೇರಣೆಯಿಂದ ವಹಿವಾಟು ಸ್ಥಗಿತಗೊಳಿಸಿ ಬೆಂಬಲ ಸೂಚಿಸಲಿವೆ. ರಸ್ತೆ ಸಾರಿಗೆ ಸಂಸ್ಥೆ, ಆಟೋ ಚಾಲಕರು, ಖಾಸಗಿ ವಾಹನಗಳ ಮಾಲೀಕರು 6 ಗಂಟೆ ಸಂಚಾರ ಸ್ಥಗಿತಗೊಳಿಸಿ ಬೆಂಬಲಿಸುವಂತೆ ವಿನಂತಿಸಿದರು.