ಹುಬ್ಬಳ್ಳಿ:ಒಂದು ದೇಶವಾಗಿ 100 ಕೋಟಿ ವ್ಯಾಕ್ಸಿನ್ ಗುರಿ ಮುಟ್ಟಿದ್ದು ದೊಡ್ಡ ಸಾಧನೆ. ಆದರೆ, ಕಾಂಗ್ರೆಸ್ ಪಕ್ಷವು ದೇಶದ ಸಾಧನೆ ಕೊಂಡಾಡುವ ಮಾನಸಿಕತೆ ಕಳೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದರು.
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ನಿಮಿತ್ತ ನಗರದಲ್ಲಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, 9 ತಿಂಗಳ ಅವಧಿಯಲ್ಲಿ ನೂರು ಕೋಟಿ ಕೋವಿಡ್ ಡೋಸ್ ಕೊಟ್ಟಿದ್ದಕ್ಕೆ ಭಾರತ ಸರ್ಕಾರವನ್ನ ಜಗತ್ತೇ ಕೊಂಡಾಡಿದೆ. ಬಿಲ್ ಗೇಟ್ಸ್ ಸಹಿತ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇಡೀ ಜಗತ್ತಿನಲ್ಲಿ 700 ಕೋಟಿ ಡೋಸ್ ವ್ಯಾಕ್ಸಿನ್ ಆಗಿದೆ. ಅದರಲ್ಲಿ 100 ಕೋಟಿ ಭಾರತದ್ದು. ಆದರೆ, ಇಂತಹ (ಕಾಂಗ್ರೆಸ್) ನಾಯಕರು ಇರುವುದು ನಮ್ಮ ದೇಶದ ದೌರ್ಭಾಗ್ಯ ಎಂದು ಹೇಳಿದರು.
ನಾನು ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರಿಗೆ ಹೇಳೋದಿಷ್ಟು.. ರಾಹುಲ್ ಗಾಂಧಿ ತರಹ ನೀವು ಆಡಬೇಡಿ. ರಾಹುಲ್ ಗಾಂಧಿಗೆ ಏನೂ ಅರ್ಥ ಆಗಲ್ಲ. ಮೋದಿ ಅವರಿಗೆ ನೀವು ಕ್ರೆಡಿಟ್ ಕೊಡಬೇಕು ಅಂತಾ ನಾವು ಬಯಸಿಲ್ಲ, ಸ್ವತಃ ಮೋದಿನೂ ಬಯಸಲ್ಲ. ಆದರೆ ನೀವು ದೇಶಕ್ಕೆ ಕ್ರೆಡಿಟ್ ಕೊಡಿ ಎಂದರು.
ಕಟೀಲ್ ಮಾತ್ರ ವೈಯಕ್ತಿಕ ನಿಂದನೆ ಮಾಡಿಲ್ಲ
ರಾಹುಲ್ ಗಾಂಧಿ ಬಗ್ಗೆ ನಳಿನ್ ಕುಮಾರ್ ಕಟೀಲ್ ಡ್ರಗ್ ಪೆಡ್ಲರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೋಶಿ, ಕಟೀಲ್ ಯಾಕೆ ಈ ರೀತಿ ಮಾತಾಡಿದ್ದಾರೆ ಗೊತ್ತಿಲ್ಲ. ಆದರೆ, ಪತ್ರಿಕೆಯಲ್ಲಿ ಬಂದಿದೆ ಎಂದಿದ್ದಾರೆ. ಆ ಬಗ್ಗೆ ನಾನು ಮಾತನಾಡಲ್ಲ. ಕೇವಲ ಕಟೀಲ್ ವೈಯಕ್ತಿಕ ನಿಂದನೆ ಮಾಡಿಲ್ಲ. ಸಿದ್ದರಾಮಯ್ಯ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡ್ತಾರೆ. 2014, 2018 ಹಾಗೂ 2019ರ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಹೀನಾಯ ಸೋಲಾಗಿದೆ. ಆದರೂ ಅವರು ಮೋದಿ ಬಗ್ಗೆ ಮಾತಾಡ್ತಾರೆ. ಯಾರೇ ಇರಲಿ ಕೆಳ ಮಟ್ಟದ ಟೀಕೆ ಮಾಡಬಾರದು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.