ಧಾರವಾಡ:ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ದುರ್ಗದ ಅನುದಾನರಹಿತ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿ ಮಕ್ಬುಲ್ ಅಹ್ಮದ್ ಜಮಖಂಡಿ ಕಡಿಮೆ ವೇತನದ ಬಗ್ಗೆ ನೋವು ತೋಡಿಕೊಂಡಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಮಕ್ಬುಲ್ ತಮ್ಮ ಸಮಸ್ಯೆ ಹೇಳಿಕೊಂಡರು. ಕಳೆದ 20 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಕೇವಲ 6 ಸಾವಿರ ಮಾತ್ರ ವೇತನ ಕೊಡುತ್ತಾರೆ. ಮಕ್ಕಳು ಹತ್ತು ರೂಪಾಯಿ ಕೇಳಿದರೂ ಕೊಡಲು ನನ್ನ ಬಳಿ ಹಣ ಇರೋದಿಲ್ಲ ಎಂದು ಮಾಧ್ಯಮದ ಮುಂದೆ ನೋವು ಹೊರಹಾಕಿದರು.