ಹುಬ್ಬಳ್ಳಿ:ಹಲವು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿರುವ ಕೊರೊನಾ, ಮಕ್ಕಳ ಬದುಕನ್ನೂ ಸಂಕಷ್ಟದ ಕೂಪಕ್ಕೆ ತಳ್ಳಿದೆ. ಸ್ಲೇಟು, ಬಳಪ ಹಿಡಿಯುವ ಕೈಗಳು ಭಿಕ್ಷೆ ಪಾತ್ರೆ ಹಿಡಿಯುವಂತೆ ಮಾಡಿದೆ.
ಕೊರೊನಾ ಹಾವಳಿಗೆ ಮಕ್ಕಳ ಬದುಕು ಅಯೋಮಯವಾಗಿದ್ದು, ಓದುವ ಮುಗ್ಧ ಮನಸ್ಸಿನ ಪುಟಾಣಿಗಳು ಭಿಕ್ಷೆ ಬೇಡುವಂತ ಸ್ಥಿತಿ ಬಂದೊದಗಿದೆ. ಅಲ್ಲದೆ, ಧಾರವಾಡ ಜಿಲ್ಲಾದ್ಯಂತ ಭಿಕ್ಷಾಟನೆ ಪ್ರಮಾಣ ಮತ್ತಷ್ಟು ವೃದ್ಧಿಸಿದೆ.
ಕುಟುಂಬದ ನಿರ್ವಹಣೆ ಹೊತ್ತ ಅಶಿಕ್ಷಿತ ಪೋಷಕರು ಉದ್ದೇಶಪೂರ್ವಕವಾಗಿ ಮಕ್ಕಳನ್ನು ಭಿಕ್ಷೆಗೆ ದೂಡುತ್ತಿದ್ದಾರೆ ಎನ್ನಲಾಗಿದೆ. ಅಷ್ಟಲ್ಲದೆ, ಕುಟುಂಬ ಸ್ಥಿತಿಯೂ ಭಿಕ್ಷಾಟನೆಯತ್ತ ಮುಖ ಮಾಡುವಂತೆ ಮಾಡಿದೆ. ಹೀಗಾಗಿ, ಭವ್ಯ ಭಾರತದ ಕನಸನ್ನು ಹೊತ್ತ ಅದೆಷ್ಟೋ ಮಕ್ಕಳ ಜೀವನ ಕೋವಿಡ್ ಹೊಡೆತಕ್ಕೆ ನಲುಗಿ ಹೋಗುತ್ತಿದೆ.
ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಹಾಗೂ ಮಕ್ಕಳ ಸಹಾಯವಾಣಿಯಿಂದ ಹಲವಾರು ಜಾಗೃತಿ ಕಾರ್ಯಕ್ರಮ ಹಾಗೂ ಕಾರ್ಯಾಚರಣೆ ಕೈಗೊಂಡಿದ್ದರೂ ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಕಾಣದ ಕೈಗಳು ಮಕ್ಕಳನ್ನು ಭಿಕ್ಷಾಟನೆಗೆ ದೂಡುತ್ತಿವೆಯೇ ಎಂಬ ಅನುಮಾನ ಮೂಡಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಂಡು ಭಿಕ್ಷಾಟನೆಯನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ.