ಧಾರವಾಡ:ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಈಜುಕೊಳ ಕಾಂಪ್ಲೆಕ್ಸ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿಗೆ ಗ್ರಹಣ ಹಿಡಿದಿದೆ.
ಹಳೆಯದಾಗಿದ್ದ ಈಜುಕೊಳ ನಿರ್ವಹಣೆ ಕೊರತೆ ಎದುರಿಸುತ್ತಿತ್ತು. ಇದರಿಂದ ಈಜುಕೊಳವನ್ನು ಹೊಸದಾಗಿ ನಿರ್ಮಾಣ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿಎಸ್ಆರ್ ಫಂಡ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.
ಆಮೆಗತಿಯಲ್ಲಿ ಸಾಗಿದ ಈಜುಕೊಳ ನಿರ್ಮಾಣ ಕಾಮಗಾರಿ ಆರಂಭದಲ್ಲಿ ಈಜುಕೊಳವನ್ನು ಮಾತ್ರ ನಿರ್ಮಾಣ ಮಾಡುವ ಯೋಜನೆ ಇತ್ತು. ಇದಕ್ಕಾಗಿ 13 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಬಳಿಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಿಸುವ ಯೋಜನೆ ರೂಪುಗೊಂಡಿತು. ಈಜುಕೊಳದ ಜೊತೆಗೆ ಕಬಡ್ಡಿ ಅಂಕಣ, ಬ್ಯಾಡ್ಮಿಂಟನ್ ಕೋರ್ಟ್, ಜಿಮ್ ಹಾಗೂ ಸಿಬ್ಬಂದಿ ವಸತಿ ಗೃಹ ಸೇರಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಬೇಕಾಗಿದೆ.
ಇದಕ್ಕಾಗಿ ಕಾಮಗಾರಿ ಮೊತ್ತ 35 ಕೋಟಿಗೆ ರೂಪಾಯಿ ಏರಿಸಲಾಯಿತು. ಮೂರು ವರ್ಷಗಳು ಕಳೆದರೂ ಕಾಮಗಾರಿ ಮಾತ್ರ ಏಕೆ ಮುಗಿಯುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆ.