ಹುಬ್ಬಳ್ಳಿ: 76 ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವ ಉತ್ತರ ಕರ್ನಾಟಕದ ಬಹುದೊಡ್ಡ ಆಸ್ಪತ್ರೆ ಹಾಗೂ ಬಡವರ ಸಂಜೀವಿನಿ ಹುಬ್ಬಳ್ಳಿಯ ಕಿಮ್ಸ್ ಈಗ ಮತ್ತೊಂದು ಸಾಧನೆಗೈದಿದೆ.
ಕೋವಿಡ್ 2ನೇ ಅಲೆ ಅನೇಕ ಜನರನ್ನು ಬಾಧಿಸಿ ಪ್ರಾಣಾಪಾಯ ತಂದೊಡ್ಡಿತು. ಅಲ್ಲದೇ ಕೋವಿಡ್ನಿಂದ ಗುಣಮುಖರಾದರೂ ಬ್ಲ್ಯಾಕ್ ಫಂಗಸ್ ಪೀಡಿತರು ಅಧಿಕ ಸಂಖ್ಯೆಯಲ್ಲಿ ಕಂಡು ಬಂದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಚಿಕಿತ್ಸೆಗೆ ಮೊರೆಹೋದರು. ಈ ಮಧ್ಯೆ ಕಿಮ್ಸ್ನ ಬಾಯಿ ಮತ್ತು ಮುಖ ಶಸ್ತ್ರ ಚಿಕಿತ್ಸಾ ವಿಭಾಗ 76 ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದೆ.
ಕೊರೊನಾದಿಂದ ಗುಣಮುಖರಾದವರಿಗೆ ಬ್ಲ್ಯಾಕ್ ಫಂಗಸ್ ಹೆಚ್ಚಾಗಿ ಕಾಡಲಾರಂಭಿಸಿತು. ಕಪ್ಪು ಶಿಲೀಂಧ್ರ ಹೆಚ್ಚಾಗಿ ಮುಖ, ಬಾಯಿಗೆ ಹರಡುತ್ತಿರುವ ಸಂದರ್ಭದಲ್ಲಿ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅವರ ನಿರ್ದೇಶನದ ಮೇರೆಗೆ ಬಾಯಿ ಮತ್ತು ಮುಖ ಶಸ್ತ್ರ ಚಿಕಿತ್ಸಾ ಘಟಕದ ತಜ್ಞ ವೈದ್ಯ ಡಾ. ಮಂಜುನಾಥ ವಿಜಾಪುರ ಅವರು ಕಿವಿ, ಮೂಗು, ಗಂಟಲು, ಕಣ್ಣಿನ ತಜ್ಞ ವೈದ್ಯರ ಸಹಕಾರದಿಂದ ಘಟಕದ ಸೀನಿಯರ್ ರೆಸಿಡೆಂಟ್ ಡಾ. ಅನುರಾಧಾ ನಾಗನಗೌಡ್ರ, ವಸಂತ ಕಟ್ಟಿಮನಿ, ತೇಜಸ್ ಯಳಮಲಿ, ಸ್ನಾತಕೋತ್ತರ ತರಬೇತಿಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳ ತಂಡ ರಚಿಸಿಕೊಂಡರು. ಈ ತಂಡ ಜೂನ್ 21ರಿಂದ ಸೆಪ್ಟೆಂಬರ್ 21ರವರೆಗೆ 140 ಬ್ಲ್ಯಾಕ್ ಫಂಗಸ್ ರೋಗಿಗಳ ಪೈಕಿ 76 ಜನರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಜೀವ ಉಳಿಸಿ ಬಡವರ ಪಾಲಿಗೆ ಆತ್ಮಬಂಧುವಿನಂತಾಗಿದೆ.