ಧಾರವಾಡ: ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತೆ ಮನೆಗೆ ಕೊನೆಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಭೇಟಿ ನೀಡಿ ಬಾಲಕಿಯ ಕುಟುಂಬದ ಅಳಲು ಆಲಿಸಿ, ಆತ್ಮಸ್ಥೈರ್ಯ ತುಂಬಿದ್ದಾರೆ.
ಈ ವೇಳೆ ಮೃತ ಬಾಲಕಿಯ ತಾಯಿ ಹಾಗೂ ತಂದೆ, ಮಗಳ ದುಸ್ಥಿತಿ ಮತ್ತು ಆತ್ಮಹತ್ಯೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅಧ್ಯಕ್ಷರ ಮುಂದೆ ತಮ್ಮ ನೋವು ತೋಡಿಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ಪ್ರತ್ಯೇಕ ಗ್ರಾಮಗಳಲ್ಲಿ ನಡೆದಿರುವ ಎರಡು ವಿಕೃತ ಕೃತ್ಯಗಳಲ್ಲಿ ನೊಂದ ಕುಟುಂಬಗಳೊಂದಿಗೆ ಆಯೋಗ ಹಾಗೂ ಸರ್ಕಾರ ಇದೆ. ಸೂಕ್ತ ಕಾನೂನು ನೆರವು, ಆಪ್ತ ಸಮಾಲೋಚನೆಯ ಮೂಲಕ ಆತ್ಮಸ್ಥೈರ್ಯ ತುಂಬಿ ನ್ಯಾಯ ಒದಗಿಸಲಾಗುವುದು. ಕುಟುಂಬದ ಸದಸ್ಯರು ಧೃತಿಗೆಡಬಾರದು ಎಂದರು.
ಸಂತ್ರಸ್ಥೆ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಮಾತನಾಡಿ, ನೊಂದ ಕುಟುಂಬದ ಭದ್ರತೆಯ ಜವಾಬ್ದಾರಿ ಪೊಲೀಸ್ ಇಲಾಖೆಗೆ ಸೇರಿದೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ. ಮಾದನಬಾವಿ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳನ್ನು ಕೂಡಲೇ ವಶಕ್ಕೆ ಪಡೆಯಲಾಗುವುದು ಎಂದರು.
ಬೋಗೂರಿನ ಬಾಲಕಿಯ ಕುಟುಂಬಕ್ಕೆ ತುರ್ತು ವೆಚ್ಚವಾಗಿ 10 ಸಾವಿರ ರೂಪಾಯಿಗಳ ನೆರವಿನ ಚೆಕ್ ಹಸ್ತಾಂತರಿಸಲಾಯಿತು.