ಹುಬ್ಬಳ್ಳಿ:ಸರಕು ಸಾಗಣೆಯಲ್ಲಿ ನೈಋತ್ಯ ರೈಲ್ವೆಯು ಒಟ್ಟು 38.86 ಮಿಲಿಯನ್ ಟನ್‌ಗಳ (ಎಂಟಿ) ಲೋಡಿಂಗ್ ಸಾಧಿಸಿದೆ. ಇದು ಕಳೆದ ಹಣಕಾಸು ವರ್ಷದ ಒಟ್ಟು ಲೋಡಿಂಗ್ ಮೀರಿಸಿದೆ ಎಂದು ವರದಿಯಾಗಿದೆ.
ದಿನಾಂಕ 18.02.2022 ರಂದು 38.19 ಮಿಲಿಯನ್ ಟನ್‌ಗಳು (ಎಂಟಿ) ಲೋಡಿಂಗ್ ಸಾಧಿಸಿದ್ದು, ಇದು ಕಳೆದ 2020-21 ಹಣಕಾಸು ವರ್ಷಕ್ಕಿಂತ ಅಧಿಕವಾಗಿದೆ. 2020-21ವರೆಗಿನ ಅವಧಿಯಲ್ಲಿ 3401.74 ಕೋಟಿ ರೂ ಆದಾಯ ಗಳಿಸಿದ್ದು, ಇದು ಕಳೆದ ಹಣಕಾಸು ವರ್ಷದ ಆದಾಯ 2603.89 ಕೋಟಿ ರೂ.ಗಿಂತ ಶೇ.30.64ರಷ್ಟು ಹೆಚ್ಚಾಗಿರುತ್ತದೆ.
ನೈಋತ್ಯ ರೈಲ್ವೆಯು ಆಟೋಮೊಬೈಲ್ ತಯಾರಕರ ಆಯ್ಕೆಯ ಸಾರಿಗೆಯಾಗಿ ಹೊರಹೊಮ್ಮುತ್ತಿದೆ. ಇಲ್ಲಿಯವರೆಗೆ ದ್ವಿಚಕ್ರ ಹಾಗು ನಾಲ್ಕು ಚಕ್ರ ವಾಹನಗಳ 196 ರೇಕ್‌ಗಳನ್ನು ರೈಲ್ವೇ ಸಾಗಿಸಿದೆ. ಇದು ಕಳೆದ ವರ್ಷಕ್ಕಿಂತ ಅತ್ಯಧಿಕ. (ಕಳೆದ ಹಣಕಾಸು ವರ್ಷದಲ್ಲಿ 193 ರೇಕುಗಳನ್ನು ಸಾಗಿಸಲಾಗಿತ್ತು).
ರೈಲ್ವೆಯು ವಿಶ್ವಾಸಾರ್ಹ, ಹಾನಿ ಮುಕ್ತ ಸಾರಿಗೆ ನೀಡುವುದರಿಂದ ಹಾಗೂ ರಸ್ತೆಗೆ ಹೋಲಿಸಿದರೆ ಉತ್ತಮ ಸಾರಿಗೆ ವ್ಯವಸ್ಥೆಯಾಗಿರುವ ಕಾರಣಕ್ಕೆ ಟೊಯೊಟಾ ತಮ್ಮ ವಾಹನಗಳ ಸಾಗಣೆಗಾಗಿ ರಸ್ತೆಯಿಂದ ರೈಲ್ವೆಗೆ ಬದಲಾಯಿಸಲು ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ. ಟಿವಿಎಸ್, ಕೆಐಎ, ಮಾರುತಿ ಸುಜುಕಿ, ಟಾಟಾ ಇವುಗಳು ರೈಲ್ವೆ ಮೂಲಕ ನಿಯತವಾಗಿ ವಾಹನಗಳನ್ನು ಸಾಗಿಸುವ ಕೆಲವು ಪ್ರಮುಖ ವಾಹನ ತಯಾರಕ ಕಂಪೆನಿಗಳಾಗಿವೆ.
ಸಕ್ಕರೆಯ ಲೋಡಿಂಗ್‌ನಲ್ಲಿ ಇಲ್ಲಿಯವರೆಗೆ 355 ರೇಕ್‌ಗಳನ್ನು ಸಾಗಿಸುವ ಮೂಲಕ ಗಣನೀಯ ಪ್ರಗತಿಯನ್ನು ಸಾಧಿಸಿದೆ. ಇದು ಈವರೆಗೆ ಲೋಡ್ ಮಾಡಲಾದ ರೇಕುಗಳಿಗಿಂತ ಅಧಿಕವಾಗಿದೆ. ಸಕ್ಕರೆ ಪ್ರಾಥಮಿಕವಾಗಿ ಬೆಳಗಾವಿ-ರಾಯಬಾಗ-ಚಿಕೋಡಿ ಪ್ರದೇಶದಿಂದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಾಂಗ್ಲಾದೇಶಕ್ಕೆ ರವಾನೆಯಾಗುತ್ತದೆ. ಇದರಿಂದ ಕಳೆದ 18ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಸಕ್ಕರೆ ರೇಕು ಸಾಗಾಣಿಕೆ ಮಾಡಿದಂತಾಗಿದೆ.
ಸಿಮೆಂಟ್ ಸಾಗಣೆಯ ಬೇಡಿಕೆಯ ಸದುಪಯೋಗ ಮಾಡಿಕೊಂಡು ಹಾಗೂ ವ್ಯಾಪಾರ ಅಭಿವೃದ್ಧಿ ಘಟಕಗಳ ಸಕ್ರಿಯ ಮಾರುಕಟ್ಟೆ ಪ್ರಯತ್ನಗಳೊಂದಿಗೆ ಕಳೆದ ವರ್ಷದ 217 ರೇಕ್‌ಗಳಿಗೆ ಹೋಲಿಸಿದರೆ ಇಲ್ಲಿಯವರೆಗೆ 265 ರೇಕ್‌ಗಳನ್ನು ಲೋಡ್ ಮಾಡಲಾಗಿದೆ. ಇದು ನಿರ್ಮಾಣ ಚಟುವಟಿಕೆಗಳ ಬೆಳವಣಿಗೆಯೊಂದಿಗೆ ಮತ್ತಷ್ಟು ಮೇಲ್ಮುಖ ಪ್ರಗತಿಯನ್ನು ತೋರುವುದಾಗಿ ನಿರೀಕ್ಷಿಸಲಾಗಿದೆ. ಸುರಕ್ಷಿತ ನಿರ್ವಹಣೆ, ಸಮಯೋಚಿತ ಮತ್ತು ವಿಶ್ವಾಸಾರ್ಹ ಸಾರಿಗೆಯಿಂದಾಗಿ ಹೆಚ್ಚಾಗಿ ರಸ್ತೆಯ ಮೂಲಕ ಸಾಗಿಸಲ್ಪಡುವ ಸಿಮೆಂಟ್ ಅನ್ನು ಈಗ ರೈಲ್ವೆ ಮೂಲಕ ಹೆಚ್ಚು ಸಾಗಿಸಲಾಗುತ್ತಿದೆ ಎಂಬುದು ನೈಋತ್ಯ ರೈಲ್ವೆಯ ಅಧಿಕಾರಿಗಳು ಹೇಳಿದ್ದಾರೆ.
ಪಾರ್ಸೆಲ್ ಆದಾಯದಲ್ಲಿ, ನೈಋತ್ಯ ರೈಲ್ವೆಯು ರೂ. 105 ಕೋಟಿಗಳ ಆದಾಯ ಗಳಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ , ಇದು ವಲಯ ರಚನೆಯಾದ ನಂತರ ಗಳಿಸಿದ ಗರಿಷ್ಠ ಆದಾಯವಾಗಿದೆ. ಎರಡು ಟೈಮ್-ಟೇಬಲ್ಡ್ ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲುಗಳ ಗುತ್ತಿಗೆಗಳನ್ನು ಯಶವಂತಪುರದಿಂದ ಐಸಿಒಡಿ, ದೆಹಲಿ ಮತ್ತು ವಾಸ್ಕೋಡಗಾಮಾದಿಂದ ಅಜಾರಾ, ಅಸಾಂ ಗೆ (ಕ್ರಮವಾಗಿ) ಬೆಂಗಳೂರು ಮತ್ತು ಹುಬ್ಬಳ್ಳಿ ವಿಭಾಗದ ವತಿಯಿಂದ ನೀಡಲಾಗಿದೆ.
ಪ್ರಸ್ತುತ ಹಣಕಾಸು ವರ್ಷದಲ್ಲಿ 232 ಟ್ರಿಪ್‌ಗಳ ಟೈಮ್ ಟೇಬಲ್ ಪಾರ್ಸೆಲ್ ರೈಲುಗಳು, ಇಂಡೆಂಟೆಡ್ ಸ್ಪೆಷಲ್, ಜಿಎಸ್ ಸ್ಪೆಷಲ್ ಮತ್ತು ಕಿಸಾನ್ ಸ್ಪೆಷಲ್ ರೈಲುಗಳಲ್ಲಿ 1.67 ಲಕ್ಷ ಟನ್ ಹಣ್ಣುಗಳು, ತರಕಾರಿಗಳು, ಐಸ್ಡ್ ಮೀನು, ಟೈರುಗಳು, ನೆಸ್ಲೆ ಉತ್ಪನ್ನಗಳು ಮತ್ತು ಇತರ ಆಹಾರ ಪದಾರ್ಥಗಳ ಸಾಗಣೆಗೆ ರೈಲ್ವೆಯು ಅನುವು ಮಾಡಿಕೊಟ್ಟಿದೆ. ಬೆಂಗಳೂರು ವಿಭಾಗವು ದೆಹಲಿ ಮತ್ತು ಉತ್ತರ ಭಾರತದ ಇತರ ನಗರಗಳಿಗೆ 33 ಕಿಸಾನ್ ಸ್ಪೆಷಲ್ ರೈಲುಗಳನ್ನು ರವಾನಿಸಿದೆ. ಇದರಿಂದ ರೈತರು ಸರಕು ಸಾಗಣೆಯಲ್ಲಿ 50% ಸಬ್ಸಿಡಿ ಮತ್ತು ದೊಡ್ಡ ಮಾರುಕಟ್ಟೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ ಎಂದು ನೈಋತ್ಯ ರೈಲ್ವೆಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಹೇಳಿದ್ದಾರೆ.
ಇದನ್ನೂ ಓದಿ:ಉಕ್ರೇನ್: ದೆಹಲಿಯಿಂದ ಕನ್ನಡಿಗರ ಕರೆತರಲು ಉಚಿತ ವಿಮಾನ ವ್ಯವಸ್ಥೆ