ಧಾರವಾಡ: ನೌಕರಿಯಲ್ಲಿದ್ದ ಮಗನೊಬ್ಬ ತನ್ನ ಎರಡನೇ ತಾಯಿಯ ಆಸ್ತಿ ಮಾರಿ ಬೀದಿಗೆ ತಳ್ಳಿರುವ ಘಟನೆ ನಡೆದಿದೆ. ಇದೀಗ ಆ ತಾಯಿಬಿಟ್ಟು ಹೋದ ಮಗನನ್ನು ಹುಡುಕಿ ಕೊಡುವಂತೆ ಧಾರವಾಡ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೇಟ ಗ್ರಾಮ ಬಸವಣ್ಣೆವ್ವ ಗುರುಪಾದಪ್ಪಾ ಕೋರಿಶೆಟ್ಟರ್ ಎಂಬ ತಾಯಿ ಮೋಸ ಹೋದವರು, ಶಿಂಗಪ್ಪ ಗುರುಪಾದಪ್ಪಾ ಕೋರಿಶೆಟ್ಟರ್ ಮೋಸ ಮಾಡಿದ ಮಗ ಎಂದು ತಿಳಿದು ಬಂದಿದೆ.
ಧಾರವಾಡದ ಅಂಕಿ ಸಂಖ್ಯೆ ವಿಭಾಗದಲ್ಲಿ ಕೆಲಸ ಮಾಡಿ ಶಿಂಗಪ್ಪ ನಿವೃತ್ತಿಯಾಗಿದ್ದು, ತಾಯಿಯ ಹೆಸರಿನಲ್ಲಿದ್ದ ಎರಡು ಎಕರೆ ಆಸ್ತಿಯನ್ನು 2.5 ಲಕ್ಷಕ್ಕೆ ಮಾರಿ ತಾಯಿಯನ್ನು ನಡುಬೀದಿಯಲ್ಲಿ ಕೈಬಿಟ್ಟಿದ್ದಾನೆ ಎಂದು ದೂರಿದ್ದಾರೆ. ಇದೀಗ ದಿಕ್ಕು ತೋಚದಂತಾಗಿರುವ ತಾಯಿ ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಮೋಸ ಮಾಡಿದ ಮಗನನ್ನು ಹುಡುಕಿಕೊಡುವಂತೆ ತಾಯಿಯ ಅಳಲು ಶಿಂಗಪ್ಪ ಅವರ ತಂದೆಗೆ ಬಸವಣ್ಣೆವ್ವ ಎರಡನೇ ಹೆಂಡತಿಯಾಗಿದ್ದು, ಗುರುಪಾದಪ್ಪ ಅವರು ಬಸವಣ್ಣೆವ್ವ ಅವರಿಗೆ ಎರಡು ಎಕರೆ ಜಮೀನು ನೀಡಿದ್ದರು. ಅವರ ನಿಧನ ಹೊಂದಿದ ನಂತರ ಶಿಂಗಪ್ಪ ಬಸವಣ್ಣೆವ್ವನನ್ನು ನಂಬಿಸಿ, ಸಹಿ ಪಡೆದುಕೊಂಡು ಆಸ್ತಿಯನ್ನು ಮಾರಿದ್ದಾನೆ ಎಂದು ಹೇಳಿದ್ದಾರೆ. ಈ ಸಂಬಂಧ ಬಸವಣ್ಣೆವ್ವ ಬೆಳಗಾವಿಯ ಕನ್ನಡತಿ ಎಂಬ ಸೇವಾ ಸಂಸ್ಥೆಯ ಮೊರೆ ಹೋಗಿದ್ದರು. ಸಂಸ್ಥೆಯವರು ಈ ವಿಷಯವನ್ನು ಬೆಳಗಾವಿ ಜಿಲ್ಲಾಧಿಕಾರಿಯ ಗಮನಕ್ಕೂ ತಂದಿದ್ದರು. ಶಿಂಗಪ್ಪ ಕೋರಿಶೆಟ್ಟರ್ ಧಾರವಾಡದ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವುದರಿಂದ ಇದೀಗ ಬಸವಣ್ಣೆವ್ವ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಬಂದು ತನಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಓದಿ :ಉಕ್ರೇನ್ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿಯ ಯುವಕನ ಮೃತದೇಹ ಪತ್ತೆ