ಧಾರವಾಡ:ಅಪ್ರಾಪ್ತೆಗೆ ತಿಂಡಿ-ತಿನಿಸು ಹಾಗೂ ಹಣದ ಆಸೆ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅಧಿಕೃತವಾಗಿ ಉಪನಗರ ಠಾಣೆಗೆ ದೂರು ನೀಡಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಡಾ. ಕಮಲಾ ಬೈಲೂರ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಪೊಲೀಸ್ ಇಲಾಖೆಯಿಂದ 14 ವರ್ಷದ ಬಾಲಕಿ ಭಿಕ್ಷಾಟನೆ ತೊಡಗಿರುವ ಮಾಹಿತಿ ಬಂದಿತ್ತು. ಅಲ್ಲದೇ ಬಾಲಕಿಯನ್ನು ದುರುಳರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಾಹಿತಿ ಆಧರಿಸಿ ಬಾಲಕಿಯನ್ನು ಹುಡುಕಿ ಇಲ್ಲಿನ ನವನಗರದ ಸ್ನೇಹಾ ತೆರೆದ ಆಶ್ರಯ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ಇದಾದ ಬಳಿಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಬಾಲಕಿಯೊಂದಿಗೆ ಆಪ್ತ ಸಮಾಲೋಚನೆ ನಡೆಸಿದಾಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿದೆ.
ಗೋಬಿ ಮಂಚೂರಿ, ಎಗ್ ರೈಸ್ ಸೇರಿದಂತೆ ತಿಂಡಿ ತಿನಿಸು ಆಸೆ ತೋರಿಸಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಬಾಲಕಿ ಆಪ್ತ ಸಮಾಲೋಚನೆಯಲ್ಲಿ ಹೇಳಿಕೊಂಡಿದ್ದಾಳೆ. ಬಾಲಕಿ ಹೇಳಿಕೆ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಪನಗರ ಠಾಣೆಗೆ ದೂರು ನೀಡಿದ್ದು, ದೌರ್ಜನ್ಯ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಮದ್ಯಕ್ಕೆ ದಾಸನಾಗಿ ನಿತ್ಯ ಕಿರುಕುಳ ನೀಡ್ತಿದ್ದ ಗಂಡನ ಮರ್ಮಾಂಗ ಕತ್ತರಿಸಿ ಕೊಂದ ಪತ್ನಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಡಾ. ಕಮಲಾ ಬೈಲೂರ ಪ್ರತಿಕ್ರಿಯಿಸಿ, ವ್ಯಕ್ತಿಯೋರ್ವ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ ಬಗ್ಗೆ ಮಕ್ಕಳ ಆಯೋಗಕ್ಕೆ ಮಾಹಿತಿ ಬಂದಿತ್ತು. ಆಗ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಮಾಹಿತಿ ಆಧರಿಸಿ ಹುಡುಗಿಯನ್ನು ಪತ್ತೆ ಮಾಡಲಾಗಿದೆ. ನಾವು ಬಾಲಕಿ ಜೊತೆ ಸಮಾಲೋಚನೆ ನಡೆಸಿದಾಗ, ಅತ್ಯಾಚಾರ ಬೆಳಕಿಗೆ ಬಂದಿದೆ. ತಿಂಡಿ ಆಸೆ ತೋರಿಸಿ ಹೀಗೆ ಮಾಡಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ ಎಂದರು.
ಸದ್ಯ ಬಾಲಕಿಯನ್ನು ನಿರ್ಭಯಾ ಕೇಂದ್ರದಲ್ಲಿ ದಾಖಲು ಮಾಡಲಾಗಿದೆ. ಆಕೆಗೆ ಅತ್ಯಾಚಾರ ಮಾಡಿದವರು ಯಾರು ಎಂಬುವುದು ಗೊತ್ತಿಲ್ಲ. ಆದರೆ ನೋಡಿದರೆ ಗುರುತಿಸುವುದಾಗಿ ಹೇಳಿದ್ದಾಳೆ ಎಂದು ಕಮಲಾ ಬೈಲೂರ ತಿಳಿಸಿದರು.