ಹುಬ್ಬಳ್ಳಿ :ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಗುಜರಿ ಬಸ್‌ವೊಂದು ವಿಭಿನ್ನ ಸಂಚಾರಿ ಮಹಿಳಾ ಶೌಚಾಲಯವಾಗಿ ರೂಪುಗೊಂಡು ಗಮನ ಸೆಳೆಯುತ್ತಿದೆ. ಗೋಕುಲ ರಸ್ತೆಯ NWKSRTC ಪ್ರಾದೇಶಿಕ ಕಾರ್ಯಾಗಾರದಲ್ಲಿ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಮಹಿಳಾ ಶೌಚಾಲಯದ ಬಸ್ ಕೆಲವೇ ದಿನಗಳಲ್ಲಿ ಬಳಕೆಗಾಗಿ ರಸ್ತೆಗಿಳಿಯಲಿದೆ.
ನಾಲ್ಕು ಟಾಯ್ಲೆಟ್‌ಗಳಲ್ಲಿ ಎರಡು ಇಂಡಿಯನ್, ಎರಡು ಕಮೋಡ್, ಎರಡು ವಾಷ್ ಬೇಸಿನ್, ಕನ್ನಡಿ, ಮಗುವಿನ ಆರೈಕೆ ಕೊಠಡಿ ಹಾಗೂ ಒಂದು ರೆಸ್ಟ್ ರೂಂ ಅಳವಡಿಕೆ ಮಾಡಲಾಗಿದೆ. ಹೊರಗಿನಿಂದ ಹಸಿರು, ಗುಲಾಬಿ ಬಣ್ಣಗಳಿಂದ ಕಂಗೊಳಿಸುವ ಮಹಿಳಾ ಶೌಚಾಲಯ ಬಸ್‌ನೊಳಗೆ ಹೋದರೆ ಮಹಿಳಾ ಸ್ನೇಹಿ ವಾತಾವರಣದಿಂದ ಸ್ವಾಗತಿಸುತ್ತದೆ.
ಡ್ರೈವರ್ ಸೀಟ್ ಒಂದನ್ನು ಬಿಟ್ಟರೆ ಉಳಿದೆಲ್ಲವನ್ನೂ ಕಿತ್ತು ಒಳಾಂಗಣ ಮಾರ್ಪಡಿಸಲಾಗಿದೆ. ಡ್ರೈವರ್ ಸೀಟ್ ಪಕ್ಕದಲ್ಲಿ ನೀರಿನ ಟ್ಯಾಂಕ್ ಇರಿಸಲಾಗಿದೆ. ಯುಪಿಎಸ್ ಬ್ಯಾಟರಿ ಅಳವಡಿಸಲಾಗಿದೆ. ನಾಲ್ಕು ಶೌಚಾಲಯಗಳಲ್ಲಿ ಎಕ್ಸಾಸ್ಟ್ ಫ್ಯಾನ್ ಅಳವಡಿಸಲಾಗಿದೆ.
ಬಸ್‌ನ ಹಿಂಭಾಗದ ಸೀಟ್‌ಗಳ ಜಾಗವನ್ನು ಎರಡು ಕೊಠಡಿಯಾಗಿಸಲಾಗಿದೆ. ಈ ಪೈಕಿ ಒಂದನ್ನು ಮಗುವಿನ ಆರೈಕೆಗೆ, ಮತ್ತೊಂದನ್ನು ವಿಶ್ರಾಂತಿಗೆಂದು ಮೀಸಲಿಡಲಾಗಿದೆ. ಎರಡೂ ಮಿನಿ ಕೊಠಡಿಗಳಲ್ಲೂ ಎರಡೆರಡು ಆಸನಗಳನ್ನು ಇರಿಸಲಾಗಿದೆ. ಎರಡು ಫ್ಯಾನ್‌ಗಳಿದ್ದು, ಮೂಲೆ ಮೂಲೆಗಳಲ್ಲಿ ಲೈಟ್ಗಳಿವೆ.
ಉತ್ತರ ಕರ್ನಾಟಕದಲ್ಲಿ ನಡೆಯುವ ದೊಡ್ಡ ದೊಡ್ಡ ಜಾತ್ರೆಗಳಿಗೆ ದೂರ ದೂರುಗಳಿಂದ ಬರುವ ಮಹಿಳೆಯರನ್ನು, ಹಾಲುಣಿಸುವ ತಾಯಂದಿರನ್ನು ಗಮನದಲ್ಲಿಟ್ಟುಕೊಂಡು ಇದನ್ನು ಸಿದ್ಧಪಡಿಸಲಾಗಿದೆ. ಜಾತ್ರಾ ಸ್ಥಳಗಳಲ್ಲಿ ಸೂಕ್ತವೆನಿಸುವ ಜಾಗ ಗುರುತಿಸಿ, ಸೆಪ್ಟಿಕ್ ಟ್ಯಾಂಕ್ ವ್ಯವಸ್ಥೆ ಕಲ್ಪಿಸಿಕೊಟ್ಟಲ್ಲಿ ಈ ಸಂಚಾರಿ ಶೌಚಾಲಯ ನಿಲ್ಲಿಸಲಾಗುತ್ತೆ.
ಇದು ಪ್ರಾಯೋಗಿಕವಷ್ಟೇ.. ಪ್ರತಿಕ್ರಿಯೆ ಹೇಗೆ ಬರಲಿದೆ ಎಂಬುದನ್ನು ಮನಗಂಡು ಮುಂದಿನ ದಿನಗಳಲ್ಲಿ ಇಂಥ ಸಂಚಾರಿ ಶೌಚಾಲಯ ಬಸ್‌ಗಳನ್ನು ಹೆಚ್ಚಿಸುವ ಯೋಜನೆ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಹೊಂದಿದೆ. ಗುಜರಿ ಬಸ್‌ಗಳು ಕಡಿಮೆ ದರಕ್ಕೆ ಮಾರಾಟವಾಗುತ್ತಿವೆ.
ಹಾಗಾಗಿ, ಅದನ್ನು ಜನಸ್ನೇಹಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಈ ಬಸ್ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್‌ಗಳನ್ನು ಶೌಚಾಲಯಗಳಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ ಎಸ್ ಪಾಟೀಲ್ ಮಾಹಿತಿ ನೀಡಿದರು.