ಹುಬ್ಬಳ್ಳಿ: ಖ್ಯಾತ ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಂಜುನಾಥ ಮರೇವಾಡ, ಮಹಾಂತೇಶ ಶಿರೂರನನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡಿದ್ದೆವು. ಕೊಲೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ತನಿಖೆಯ ನಂತರವೇ ಗೊತ್ತಾಗಬೇಕಿದೆ ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್ ಹೇಳಿದರು.
ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ನೇಮಿಸಿದ್ದೆವು. ಆರೋಪಿಗಳ ಚಹರಾಪಟ್ಟಿ ಬಗ್ಗೆ ಅಕ್ಕಪಕ್ಕದ ಜಿಲ್ಲೆಯ ಪೊಲೀಸರಿಗೆ ತಿಳಿಸಿದ್ದೆವು. ಆ ಪ್ರಕಾರ ಆರೋಪಿಗಳನ್ನು ಬಂಧಿಸಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಆರೋಪಿಗಳ ಬಂಧನವಾಗಿದೆ. ಇನ್ನೂ ವಿಚಾರಣೆ ಬಾಕಿ ಇದೆ ಎಂದು ಅವರು ತಿಳಿಸಿದರು. ಆರೋಪಿ ಮಹಾಂತೇಶ ಪತ್ನಿ ವನಜಾ ಅವರನ್ನು ವಿಚಾರಣೆ ಮಾಡಿ ಕಳಿಸಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯಬೇಕಿದೆ. ವಿಚಾರಣೆಯ ನಿಟ್ಟಿನಲ್ಲಿ ಹಲವರನ್ನ ಕರೆಯಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ವನಜಾಕ್ಷಿ ಅವರನ್ನು ಸತತ ನಾಲ್ಕು ಗಂಟೆಗಳ ಕಾಲ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್, ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ ನೇತೃತ್ವದಲ್ಲಿ ವಿಚಾರಣೆ ನಡೆಸಿ ಮನೆಗೆ ವಾಪಸ್ ಕಳಿಸಲಾಗಿದೆ. ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ಗುರೂಜಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ಗೆ ರವಾನಿಸಲಾಗಿದೆ. ಮೂಲತಃ ಬಾಗಲಕೋಟೆಯವರಾದ ಚಂದ್ರಶೇಖರ್ ಗುರೂಜಿ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ವಾಸವಾಗಿದ್ದರು. ವಾಸ್ತು ಕುರಿತು ಸಲಹೆ, ಸೂಚನೆ ನೀಡಲು ಜುಲೈ 3ರಂದು ಪ್ರೆಸಿಡೆಂಟ್ ಹೋಟೆಲ್ನ ಕೊಠಡಿ ನಂ. 220 ರಲ್ಲಿ ವಾಸವಾಗಿದ್ದರು. ಬುಧವಾರ ಕೊಠಡಿ ತೆರವುಗೊಳಿಸುವುದಾಗಿ ಹೇಳಿದ್ದರು. ಹೋಟೆಲ್ಗೆ ಬಂದಿದ್ದ ಹಂತಕರು ಗುರೂಜಿಗೆ ದೂರವಾಣಿ ಕರೆ ಮಾಡಿ, ಸ್ವಾಗತಕಾರರ ಕೌಂಟರ್ನಲ್ಲಿ ಕಾಯುತ್ತಿರುವುದಾಗಿ ತಿಳಿಸಿದ್ದರು. ಬಳಿಕ ಸ್ವಾಗತಕಾರರ ಕೌಂಟರ್ಗೆ ಬಂದ ಗುರೂಜಿ, ಆರೋಪಿಗಳ ಬಳಿ ಕುಳಿತು ಕುಶಲೋಪರಿ ವಿಚಾರಿಸಿದ್ದಾರೆ. ಅವರಲ್ಲಿ ಒಬ್ಬ ಗುರೂಜಿ ಕಾಲಿಗೆ ನಮಸ್ಕರಿಸಿದ ಹಾಗೆ ಮಾಡಿದ್ದಾನೆ. ಅದೇ ವೇಳೆ ಮತ್ತೊಬ್ಬ ಚಾಕುವಿನಿಂದ ಇರಿದಿದ್ದಾನೆ. ಹತ್ಯೆ ಕೃತ್ಯ ನಡೆಯುತ್ತಿದ್ದಂತೆ ಅಲ್ಲಿದ್ದವರು ಭಯದಿಂದ ಹೊರಗೆ ಓಡಿ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
(ಇದನ್ನೂ ಓದಿ: ಸರಳವಾಸ್ತು ಗುರೂಜಿ ಕೊಲೆ ಕೇಸ್: ರಾಮದುರ್ಗದಲ್ಲಿ ಸಿಕ್ಕಿಬಿದ್ದ ಆರೋಪಿಗಳು)