ಹುಬ್ಬಳ್ಳಿ: ಮಾಧ್ಯಮದ ಸ್ನೇಹಿತರಿಂದ ಸಾ ರಾ ಮಹೇಶ್ ರಾಜೀನಾಮೆ ವಿಚಾರ ತಿಳಿದಿದೆ. ಸಾ ರಾ ಮಹೇಶ್ರನ್ನ ಪಕ್ಷ ಕಳೆದುಕೊಳ್ಳಬಾರದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಬಸವರಾಜ್ ಹೊರಟ್ಟಿ ಸುದ್ದಿಗೋಷ್ಟಿ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಕಚೇರಿಗೆ ನಾನು ಫೋನ್ ಮಾಡಿದೆ. ಆದ್ರೆ ಸ್ಪೀಕರ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಾ ರಾ ಮಹೇಶ್ ರಾಜೀನಾಮೆ ಇಲ್ಲಿಯವರೆಗೂ ಗೌಪ್ಯವಾಗಿ ಯಾಕೆ ಇಟ್ಟರು?, ಅವರು ಜೆಡಿಎಸ್ ನ ನಿಷ್ಠಾವಂತ ಶಾಸಕರು ಜೊತೆಗೆ ಕುಮಾರಸ್ವಾಮಿ ಜೊತೆ ಆಪ್ತರಾಗಿದ್ದರು. ನಾನು ಸಹ ಸಾ ರಾ ಮಹೇಶ್ರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುವೆ ಎಂದರು.
ಮಾಧ್ಯಮಕ್ಕೆ ಮಾಹಿತಿ ನೀಡುವ ಮಧ್ಯದಲ್ಲಿಯೇ ಸ್ಪೀಕರ್ ಕಚೇರಿಯ ವಿಶಾಲಾಕ್ಷಿಯವರಿಂದ ಹೊರಟ್ಟಿ ಮಾಹಿತಿ ಪಡೆದರು. ಆಗ ಸ್ಪೀಕರ್ ಕಚೇರಿಗೆ ಯಾವುದೇ ರಾಜೀನಾಮೆ ಬಂದಿಲ್ಲವೆಂದು ವಿಶಾಲಾಕ್ಷಿ ಸ್ಪಷ್ಟನೆ ನೀಡಿದರು.
ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದ ಒಂದಿಲ್ಲೊಂದು ವಿವಾದ ಹೊಗೆಯಾಡುತ್ತಿದೆ. 11 ಶಾಸಕರು ನನ್ನ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರೆ. ಆ ಬಗ್ಗೆ ಶರವಣ ಮೂಲಕ ವರಿಷ್ಠರಿಗೆ ಮಾಹಿತಿ ನೀಡಿದ್ದೇವೆ. ಶಾಸಕರಲ್ಲಿ ಅಸಮಾಧಾನ ಇರೋದಂತು ಸಹಜ. ಎಷ್ಟೇ ಕಷ್ಟದಲ್ಲಿದ್ದರೂ ನಾನು ಪಕ್ಷದಿಂದ ದೂರ ಹೋಗಿಲ್ಲ. ಕೆಲವು ವಿಚಾರಗಳಲ್ಲಿ ಈಗಲೂ ನನಗೆ ಅಸಮಾಧಾನ ಇದೆ. ನಮ್ಮನ್ನ ಗಣನೆಗೆ ತಗೆದುಕೊಳ್ಳಬೇಕು. ಪ್ರೀತಿ ವಿಶ್ವಾಸದಿಂದ ನಡೆಸಿಕೊಳ್ಳಬೇಕು. ಈಗಲೂ ನನಗೆ ಅಸಮಾಧಾನ ಇದೆ. ಆದ್ರೆ ನನ್ನ ಅಸಮಾಧಾನದಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎಂದರು.