ಹುಬ್ಬಳ್ಳಿ :ನನಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ನೀಡಿದೆ. ನಾನು ಕಾಂಗ್ರೆಸ್ ಪಕ್ಷ ಬಿಡೋ ಪ್ರಶ್ನೆಯೇ ಇಲ್ಲ. ನನ್ನ ಕೊನೆಯ ಉಸಿರಿರೋವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್ ಆರ್ ಪಾಟೀಲ್ ಸ್ಪಷ್ಟನೆ ನೀಡಿದರು. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಬಂದಾಗ ಭೇಟಿಯಾಗಿಲ್ಲ ನಿಜ.
ಆದರೆ, ನಾನು ಸುರ್ಜೇವಾಲಾ ಅವರನ್ನು ಭೇಟಿಯಾಗಿ ತಿಳಿಸಿದ್ದೇನೆ. ದೆಹಲಿಗೆ ಬಂದು ಸೋನಿಯಾ ಹಾಗೂ ರಾಹುಲ್ ಭೇಟಿಯಾಗುವಂತೆ ಹೇಳಿದ್ದಾರೆ. ದೆಹಲಿಗೆ ಹೋಗಿ ರಾಹುಲ್ ಗಾಂಧಿ-ಸೋನಿಯಾ ಗಾಂಧಿ ಅವರನ್ನ ಭೇಟಿಯಾಗುತ್ತೇನೆ ಎಂದರು. ಉತ್ತರ ಕರ್ನಾಟಕ ಅಸಮಾನತೆ ಹೋಗಲಾಡಿಬೇಕು ಎಂಬ ಉದ್ದೇಶದಿಂದ ಹೋರಾಟ ಮಾಡುತ್ತಿದ್ದೇವೆ.
ಕಾಂಗ್ರೆಸ್ ಪಕ್ಷ ಕೂಡ ನಮ್ಮ ಜೊತೆ ಇರುತ್ತದೆ. ಕಾಂಗ್ರೆಸ್ನಿಂದಲೂ ಸಹ ಮಹಾದಾಯಿ ಹೋರಾಟ ಆಗುತ್ತದೆ. ಆದರೆ, ಅದಕ್ಕೂ ಮೊದಲು ನಾನು ಹೇಳಿದ್ದರಿಂದ ಈಗ ಈ ಯಾತ್ರೆಗೆ ಸಿದ್ಧತೆ ಮಾಡಿದ್ದೇವೆ. ವಿವಿಧ ಸಂಘಟನೆಗಳು ಸೇರಿದಂತೆ ಹಲವು ರಾಜಕಾರಣಿಗಳು ಬೆಂಬಲ ನೀಡಲಿದ್ದಾರೆ ಎಂದರು.
ನಾನು ಪಕ್ಷ ಬಿಟ್ಟಿಲ್ಲ, ಶಕ್ತಿ ಪ್ರದರ್ಶನವನ್ನೂ ಮಾಡುತ್ತಿಲ್ಲ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ್ ಸ್ಪಷ್ಟನೆ ನೀಡಿರುವುದು.. ಮಹಾದಾಯಿ,ಕೃಷ್ಣ ನವಲಿ ಯೋಜನೆಗೆ ಆಗ್ರಹಿಸಿ ಸಂಕಲ್ಪ ಯಾತ್ರೆ :ಉತ್ತರಕರ್ನಾಟಕ ಸ್ವಾಭಿಮಾನ ವೇದಿಕೆಯಿಂದ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದು ಯಾತ್ರೆ ಮಾಡುತ್ತಿಲ್ಲ. ನೀರಾವರಿ ಯೋಜನೆಗಾಗಿ ಪಕ್ಷಾತೀತ ರ್ಯಾಲಿ ಮಾಡುತ್ತೇವೆ. ನಾನೇನು ಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಬದಲಾಗಿ ಪರಿಷತ್ ವಿಪಕ್ಷ ನಾಯಕನಿದ್ದಾಗಲೇ ಈ ಘೋಷಣೆ ಮಾಡಿದ್ದೆ.
ಹೀಗಾಗಿ, ಉತ್ತರ ಕರ್ನಾಟಕ ಭಾಗಕ್ಕೆ ಸಂಪೂರ್ಣ ನೀರಿನ ಯೋಜನೆ ಜಾರಿಯಾಗಬೇಕು ಎಂದು ಆಗ್ರಹಿಸಿ ಏ. 13 ರಿಂದ 17ರವರೆಗೆ ರ್ಯಾಲಿ ಹಮ್ಮಿಕೊಂಡಿದ್ದೇವೆ ಎಂದರು. ನರಗುಂದದಿಂದ ರ್ಯಾಲಿ ಆರಂಭಿಸಿ ಬಾಗಲಕೋಟಿಯ ಬೀಳಗಿ ತಾಲೂಕಿನ ಬಾಡಗಂಡಿಯವರೆಗೂ ನಡೆಯಲಿದ್ದು, ಬಾಪೂಜಿ ಶಾಲೆಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.
ಇದನ್ನೂ ಓದಿ:ಅವ್ರರವ್ರ ರಕ್ಷಣೆ ಅವ್ರು ಮಾಡ್ಕೊಳ್ಳಲು ಎಲ್ರೂ ಸ್ವತಂತ್ರರು.. ನಾವ್ ಮಾತ್ನಾಡಬಾರ್ದು, ನಮ್ ಕೆಲ್ಸಾ ಮಾತ್ನಾಡ್ಬೇಕು : ಸಿಎಂ