ಹುಬ್ಬಳ್ಳಿ :ನಗರದಲ್ಲಿ ನಡೆದ ಮಹಿಳೆಯ ಮೇಲೆ ಹಲ್ಲೆ ಪ್ರಕರಣದಿಂದ ಮಹಿಳೆಯರು ರಾತ್ರಿಹೊತ್ತು ಹೊರಗೆ ಬರಲು ಆತಂಕ ಪಡುತ್ತಿದ್ದು, ಕಿಡಿಗೇಡಿಗಳ ಮೇಲೆ ಕಠಿಣ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಹಿಳೆಯ ಮೇಲೆ ಪುಡಿ ರೌಡಿಗಳ ಪುಂಡಾಟ ಆರೋಪ ಹುಬ್ಬಳ್ಳಿಯ ಹೆಗ್ಗೆರಿ ಬಡಾವಣೆಯ ಮಾರುತಿ ಕಾಲೋನಿಯಲ್ಲಿ ನಿನ್ನೆ ತಡರಾತ್ರಿ ರಾಜೇಶ್ವರಿ ಎಂಬುವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಅದೇ ಬಡಾವಣೆಯ ರಾಕೇಶ್ ಹೆಬ್ಬಳ್ಳಿ ಮತ್ತು ಸಚಿನ್ ಹೆಬ್ಬಳ್ಳಿ ಎಂಬ ಯುವಕರು ಹಲ್ಲೆ ನಡೆಸಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ-ವಾಣಿಜ್ಯ ನಗರಿಯಲ್ಲಿ ತಡರಾತ್ರಿ ಮಹಿಳೆಯರ ಮೇಲೆ ದುಷ್ಕರ್ಮಿಗಳು ಹಲ್ಲೆ : ಆರೋಪ
ಪ್ರಕರಣದ ಹಿನ್ನೆಲೆ ಏನು?
ಮೊದಲೆಲ್ಲ ನನ್ನ ಬಳಿ ಬಂದು ಖರ್ಚಿಗೆ ಹಣ ಕೇಳುತ್ತಿದ್ದರು. ಹಣ ಕೊಡುವುದಿಲ್ಲ ಎಂದಿದ್ದಕ್ಕೆ ನಮ್ಮ ಮನೆ ಮುಂದೆ ನಿತ್ಯ ರಾಕೇಶ ಮತ್ತು ಸಚಿನ್ ಗುಂಪು ಕಟ್ಟಿಕೊಂಡು ಬಂದು ರಾತ್ರಿ ಎಣ್ಣೆ ಪಾರ್ಟಿ ಮಾಡಿ ಗಲಾಟೆ ಮಾಡುತ್ತಾರೆ. ಈ ಬಗ್ಗೆ ಹಲವು ಬಾರಿ ಪೊಲೀಸರಿಗೂ ಮಾಹಿತಿ ನೀಡಿದ್ದೆ. ಆದರೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ನಿನ್ನೆ ತಡರಾತ್ರಿ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದರು. ನನ್ನ ಮಗಳಿಗೆ ಆರೋಗ್ಯ ಸರಿ ಇಲ್ಲ. ಮನೆ ಮುಂದೆ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ, ಚಾಕುವಿನಿಂದ ಇರಿಯಲು ಬಂದಿದ್ದರು ಎಂದು ಸಂತ್ರಸ್ತ ಮಹಿಳೆ ರಾಜೇಶ್ವರಿ ಹೇಳುತ್ತಾರೆ.
ಅದೃಷ್ಟವಶಾತ್ ಪುಡಿ ರೌಡಿಗಳು ಬೀಸಿದ ಚಾಕು ರಾಜೇಶ್ವರಿ ಕಣ್ಣಿನ ಮೇಲ್ಬಾಕ್ಕೆ ಇರಿದುಕೊಂಡು ಹೋಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ರಾಜೇಶ್ವರಿ ಮೇಲಿನ ಹಲ್ಲೆಯಿಂದ ಕಾಲೋನಿಯಲ್ಲಿರುವ ಮಹಿಳೆಯರು ಆತಂಕಕ್ಕೊಳಗಾಗಿದ್ದು, ಹಲ್ಲೆ ಮಾಡಿದ ಯುವಕರ ಮೇಲೆ ಕ್ರಮಕೈಗೊಂಡು, ನಮಗೆ ರಕ್ಷಣೆ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.
ಹಲ್ಲೆ ಮಾಡಿದ ರಾಕೇಶ್ ಮತ್ತು ಸಚಿನ್ ಇಬ್ಬರು ತಾರಿಹಾಳದ ನಿವಾಸಿಗಳಾಗಿದ್ದು, ಮಾರುತಿ ಕಾಲೋನಿಯಲ್ಲಿ ಗೆಳೆಯರ ಜೊತೆ ಮನೆ ಮಾಡಿಕೊಂಡಿದ್ದಾರೆ. ನಿತ್ಯ ಎಣ್ಣೆ ಪಾರ್ಟಿ ಮಾಡುವ ಇವರು ಸಾರ್ವಜನಿಕರ ಜೊತೆ ಕಿರಿಕ್ ತೆಗೆಯುತ್ತಿದ್ದಾರೆ. ಆದರೆ ಈ ಕುರಿತು ಇಲ್ಲಿನ ನಿವಾಸಿಗಳು ಪೊಲೀಸರಿಗೆ ದೂರು ನೀಡಿದರೂ ಕ್ಯಾರೆ ಅಂದಿಲ್ಲ ಎನ್ನುವುದು ಬೇಸರದ ಸಂಗತಿ.