ಹುಬ್ಬಳ್ಳಿ: 2020-21 ನೇ ಸಾಲಿನ ವಿವಿಧ ಅಭಿವೃದ್ಧಿಗಾಗಿ ಅನುದಾನ ಮೀಸಲಿಡಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಹೇಳಿದರು. ಪಾಲಿಕೆ ಕೇಂದ್ರ ಸಭಾಂಗಣದಲ್ಲಿ ಆಯವ್ಯಯ ಕುರಿತು ಸಾರ್ವಜನಿಕ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆದು ಅವರು ಮಾತನಾಡಿದರು.
ಪಿಎಸ್ಆರ್ ಮತ್ತು ಪಾಲಿಕೆಯ ಅನುದಾನದಡಿ ಅವಶ್ಯಕತೆಗೆ ತಕ್ಕಂತೆ ಆಯ್ದ ಸ್ಥಳಗಳಲ್ಲಿ ಬಸ್ ನಿಲ್ದಾಣಗಳ ಅಭಿವೃದ್ಧಿ ಮಾಡಲಾಗುವುದು. ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನಕ್ಕೆ ಕಡ್ಡಾಯವಾಗಿ ಶೇ.50 ರಷ್ಟು ಸರ್ಟಿಫಿಕೇಟ್ ತೆಗೆದುಕೊಂಡು ಮಾಡಲಾಗುವುದು. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಕಮೀಷನರ್ ಜೊತೆ ಸೇರಿ ಪಾರ್ಕಿಂಗ್ ನಿರ್ಮಾಣಕ್ಕೆ ಸಿಟಿ ಗುರುತಿಸಿ ಪರಿಶೀಲಿಸಲಾಗಿದೆ. ಪಾರ್ಕಿಂಗ್ ಬಳಸುವ ಸಲುವಾಗಿ ಪ್ರಸ್ತಾವನೆ ತಯಾರಿಸಿ ಈ ವರ್ಷ ಎಲ್ಲಾ ಸ್ಥಳಗಳಲ್ಲಿ ಪಾರ್ಕಿಂಗ್ಗೆ ಟೆಂಡರ್ ಕರೆಯಲಾಗುವುದು. ಇದರಲ್ಲಿ ಬರುವಂತಹ ಆದಾಯದಲ್ಲಿ ಶೇ.50 ರಷ್ಟು ಪ್ರಸ್ತುತ ಪಾರ್ಕಿಂಗ್ಗಳ ಅಭಿವೃದ್ಧಿಗೆ ಮತ್ತು ಶೇ.50 ರಷ್ಟು ಅನುದಾನವನ್ನು ಮುಂಬರುವ ಹೊಸ ಪಾರ್ಕಿಂಗ್ ಪ್ಲೇಸ್ ಗಳನ್ನು ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಬೀದಿ ಬದಿ ವ್ಯಾಪಾರಸ್ಥ ಸಮಿತಿಯ ಜೊತೆ ಚರ್ಚಿಸಿ ನೇರವಾಗಿ ಪಾಲಿಕೆಗೆ ಹಣ ಪಾವತಿಸುವ ವ್ಯವಸ್ಥೆ ಮಾಡಲಾಗುವುದು. ಕೋವಿಡ್ ಕಾರಣದಿಂದ ಸ್ಟೇಡಿಯಂ ಅಭಿವೃದ್ಧಿಗಾಗಿ ಈ ವರ್ಷ ಅನುದಾನ ಬಿಡುಗಡೆಯಾಗಿಲ್ಲ. ಆದಾಯ ಬಂದರೆ ಖಂಡಿತ ಅಭಿವೃದ್ಧಿ ಮಾಡಲಾಗುತ್ತದೆ. ರೋಡ್ ಕಟ್ಟಿಂಗ್ನಿಂದ ರಸ್ತೆ ಹಾಳಾಗುತ್ತಿದೆ. ಮೊದಲು ಕೈಪಿಡಿ ಪ್ರಕಾರ ಕಟ್ಟಿಂಗ್ ನಡೆಯುತ್ತಿತ್ತು. ಇನ್ನು ಮುಂದೆ ರೋಡ್ ಕಟ್ಟಿಂಗ್ ಮಾಡಬೇಕಾದರೆ ಕಡ್ಡಾಯವಾಗಿ ಆನ್ಲೈನ್ ಮೂಲಕ ಹಣ ಪಾವತಿಸಿ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.