ಹುಬ್ಬಳ್ಳಿ:ಕರ್ಫ್ಯೂ ತಪಾಸಣೆಗಾಗಿ ಸ್ವತಃ ರಸ್ತೆಗಳಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್, ನಿಯಮ ಉಲ್ಲಂಘಿಸಿ ಸುಖಾಸುಮ್ಮನೆ ಓಡಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಫೀಲ್ಡಿಗಿಳಿದ ಪೊಲೀಸ್ ಕಮಿಷನರ್: ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳ ಜಪ್ತಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಜನರು ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ, ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕಣ್ಣೀರು ಹಾಕಿದ ಮಹಿಳೆ:
ವಾಹನ ತಪಾಸಣೆ ವೇಳೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಕೆಳಗಿಳಿಸಿ ಆಟೋ ಸೀಜ್ ಮಾಡಲು ಪೊಲೀಸರಿಗೆ ಸೂಚನೆ ನೀಡಿದರು. ಈ ವೇಳೆ ಮಹಿಳೆ ನಾನು ಕುಂದಗೋಳ ಪಟ್ಟಣ ಪಂಚಾಯತಿ ಉದ್ಯೋಗಿ. ಪಟ್ಟಣ ಪಂಚಾಯತಿ ಅಧಿಕಾರಿಗಳು ಕೆಲಸಕ್ಕೆ ಬರಬೇಕು ಅಂತ ತಾಕೀತು ಮಾಡುತ್ತಾರೆ. ಅದಕ್ಕಾಗಿ ನಾನು ನಿತ್ಯ ಬಾಡಿಗೆ ಆಟೋ ಮಾಡಿಕೊಂಡು ಕುಂದಗೋಳಕ್ಕೆ ಹೋಗುತ್ತಿದ್ದೇನೆ. ಈಗ ನೀವು ಆಟೋ ಸೀಜ್ ಮಾಡಿದ್ರೆ, ನಾನು ಹೇಗೆ ಕೆಲಸಕ್ಕೆ ಹೋಗಲಿ ಎಂದು ಕಮೀಷನರ್ ಎದುರು ಕಣ್ಣೀರು ಹಾಕಿದರು.
ಬಳಿಕ ಮಾತನಾಡಿದ ಪೊಲೀಸ್ ಆಯುಕ್ತ ಲಾಬುರಾಮ್, ಜನರಿಗೆ ಎಷ್ಟು ಹೇಳಿದರೂ ಕೇಳುತ್ತಿಲ್ಲ. ಹೀಗಾಗಿ, ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗೂ ಇದರಿಂದ ಸಮಸ್ಯೆಯಾಗುತ್ತದೆ. ಇಂತಹ ಮಹಿಳೆಯರ ಸಮಸ್ಯೆಗಳನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅರಿತು ಕೆಲಸಕ್ಕೆ ನಿಯೋಜನೆ ಮಾಡಬೇಕು ಎಂದರು.
ಇದನ್ನೂ ಓದಿ:ಪತ್ನಿಯ ಮೃತದೇಹದ ಪಕ್ಕದಲ್ಲೇ ಪತಿಯ ಜೀವನ್ಮರಣ ಹೋರಾಟ: ದುರಂತ ಅಂತ್ಯ ಕಂಡ ದಂಪತಿ!