ಹುಬ್ಬಳ್ಳಿ: ರಾಜ್ಯದಲ್ಲಿಯೇ ಮೊದಲು ಪ್ಲಾಸ್ಮಾ ಥೆರಪಿ ನಡೆಸಿ ಯಶಸ್ವಿಯಾಗಿದ್ದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಇದೀಗ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖದಿಂದ ಕೊಂಚ ನಿರಾಳವಾಗಿದೆ. ಕೋವಿಡ್ ಮೊದಲನೇ ಅಲೆಯಿಂದ ಬೆಚ್ಚಿಬಿದ್ದಿದ್ದ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಿದ್ದ ಕಿಮ್ಸ್ ಆಸ್ಪತ್ರೆಯಲ್ಲಿಗ ಪ್ಲಾಸ್ಮಾ ಚಿಕಿತ್ಸೆ ಸ್ಥಗಿತಗೊಂಡಿದೆ.
ಯಶಸ್ವಿ ಪ್ಲಾಸ್ಮಾ ಥೆರಪಿ ನಡೆಸಿದ್ದ ಕಿಮ್ಸ್ ಆಸ್ಪತ್ರೆಯ ವೈದ್ಯಕೀಯ ತಂಡ 108 ಜನರಿಗೆ ಪ್ಲಾಸ್ಮಾ ಥೆರಪಿ ಮಾಡಿತ್ತು. ಥೆರಪಿಗೆ ಒಳಪಟ್ಟಿದ್ದರೂ ಕೆಲವರಿಗೆ ಬಹು ಕಾಯಿಲೆ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಆದರೂ ಪ್ಲಾಸ್ಮಾ ಥೆರಪಿ ನಡೆಸಿ ರಾಜ್ಯದಲ್ಲಿಯೇ ಹೆಗ್ಗಳಿಕೆಗೆ ಕಿಮ್ಸ್ ಪಾತ್ರವಾಗಿತ್ತು.
ಕಿಮ್ಸ್ನಲ್ಲಿ ಪ್ಲಾಸ್ಮಾ ಥೆರಪಿ ಸ್ಥಗಿತ ಇದೀಗ ತೀವ್ರ ಉಸಿರಾಟದ ಸಮಸ್ಯೆ ಇರುವ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಕೊರೊನಾ ಎರಡನೇ ಅಲೆ ಬರಲಿದೆ ಎಂಬ ಆತಂಕದಲ್ಲಿದ್ದ ಜನರಿಗೆ ಕೊಂಚ ನಿರಾಳವಾಗಿದೆ. ಇದರಿಂದಾಗಿ ಪ್ಲಾಸ್ಮಾ ಥೆರಪಿಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಕೊರೊನಾ ಎರಡನೇ ಅಲೆ ಬಂದ್ರೆ ಮತ್ತೆ ಪ್ಲಾಸ್ಮಾ ಚಿಕಿತ್ಸೆ ನೀಡಬಹುದು ಎಂದು ಕಿಮ್ಸ್ ವೈದ್ಯರ ತಂಡ ಪ್ಲಾಸ್ಮಾವನ್ನು ಸಂಗ್ರಹಿಸಿಟ್ಟಿದ್ದರು.
ತಲಾ 200 ಎಂಎಲ್‌ನ 12 ಬಾಟಲ್ ಹಾಗೂ ಒಂದು 100 ಎಂಎಲ್ ಬಾಟಲ್ ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಸಂಗ್ರಹಿಸಿಡಲಾಗಿದೆ. ಅಗತ್ಯ ಬಿದ್ದರೆ ಬಳಕೆ ಮಾಡಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್)ನಿಂದ ಒಪ್ಪಿಗೆ ಪಡೆದು ಕಿಮ್ಸ್ನಲ್ಲಿ ಪ್ಲಾಸ್ಮಾ ಥೆರಪಿ ನಡೆಸಲಾಗಿತ್ತು. ಅಲ್ಲದೆ ಪ್ಲಾಸ್ಮಾ ದಾನಿಗಳಿಗೆ ರಾಜ್ಯ ಸರ್ಕಾರ 5 ಸಾವಿರ ರೂ. ಪ್ರೋತ್ಸಾಹಧನ ನೀಡುವುದಾಗಿ ಪ್ರಕಟಿಸಿತ್ತು.
ಇದರ ಪರಿಣಾಮವಾಗಿ 60ಕ್ಕೂ ಹೆಚ್ಚು ಜನರು ಪ್ಲಾಸ್ಮಾ ದಾನ ಮಾಡಿದ್ದಲ್ಲದೇ ಕೆಲವು ವೈದ್ಯರೂ ಸಹ ಮುಂದೆ ಬಂದು ಪ್ಲಾಸ್ಮಾ ದಾನ ಮಾಡಿದ್ದರು. ಇನ್ನು ಸೋಂಕು ದೃಢಪಟ್ಟು, ಗುಣ ಹೊಂದಿದ ವ್ಯಕ್ತಿಯಿಂದ 400 ಮಿ.ಲೀ. ಪ್ಲಾಸ್ಮಾ ಪಡೆಯಲಾಗುತ್ತದೆ. ಅದರಲ್ಲಿ ತೀವ್ರ ತರಹದ ಸೋಂಕುಳ್ಳ ವ್ಯಕ್ತಿಗೆ 200 ಎಂಎಲ್ ಪ್ಲಾಸ್ಮಾವನ್ನು ಮೊದಲ ಬಾರಿಗೆ ನೀಡಲಾಗುತ್ತದೆ. ಕೆಲ ದಿನಗಳು ನಂತರ ಮತ್ತೆ 200 ಎಂಎಲ್ ಕೊಡಲಾಗುತ್ತದೆ.
ಥೆರಪಿಗೊಳಪಟ್ಟ ವ್ಯಕ್ತಿಯ ಮೇಲೆ ನಿಗಾ ಇಡಲಾಗುತ್ತದೆ. ಹೀಗೆ ಪ್ಲಾಸ್ಮಾ ಥೆರಪಿ ನಡೆಸುವ ಮೂಲಕ ರಾಜ್ಯದಲ್ಲೇ ಮಾದರಿಯಾಗಿದ್ದ ಕಿಮ್ಸ್ ಆಸ್ಪತ್ರೆಯಲ್ಲಿ ಇದೀಗ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದರಿಂದ ಸದ್ಯದ ಮಟ್ಟಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ.