ಹುಬ್ಬಳ್ಳಿ:ಕೊರೊನಾ ಅಟ್ಟಹಾಸಕ್ಕೆ ಹಲವರ ಬಾಳು ಬೀದಿಗೆ ಬರುತ್ತಿದೆ. ಲಾಕ್‌ಡೌನ್ ಪರಿಣಾಮ ಜನರು ತತ್ತರಿಸಿ ಹೋಗಿದ್ದಾರೆ. ದುಡಿದು ತಿನ್ನುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ರೋಗಿಗಳು ಹಾಗೂ ವಿಶೇಷ ಚೇತನರ ಸ್ಥಿತಿಯಂತೂ ಶೋಚನೀಯವಾಗಿದೆ. ನಗರದಲ್ಲಿ ಕೈ ಕಾಲಿನ ಶಕ್ತಿ ಕಳೆದುಕೊಂಡ ಒಂಟಿ ಯುವತಿಯ ಸದ್ಯದ ಪರಿಸ್ಥಿತಿ ಮನಕಲುಕುವಂತಿದೆ.
ಮರುಕ ಹುಟ್ಟಿಸುವಂತಿದೆ ದಿವ್ಯಾಂಗ ಯುವತಿಯ ಜೀವನದ ವ್ಯಥೆ ಹುಬ್ಬಳ್ಳಿಯ ಕೃಷ್ಣಾಪುರ ಓಣಿಯ ಈ ಯುವತಿಯ ಕಥೆ ಮರುಕ ಹುಟ್ಟಿಸುವಂತಿದೆ. ಅಮ್ಮ, ಮಗಳು ಮತ್ತು ಮಗನಿದ್ದ ಈ ಮನೆಯಲ್ಲಿ ಯುವತಿ ಏಕಾಂಗಿಯಾಗಿ ಬದುಕು ಸಾಗಿಸುತ್ತಿದ್ದಾಳೆ.
ರೇಣುಕಾ ಹೊಸಮನಿ ಎಂಬ ಈ ಯುವತಿಗೆ ಓಡಾಡಲು ಸಾಧ್ಯವಾಗುತ್ತಿಲ್ಲ. ಈಕೆ 2017ರಲ್ಲಿ ತನ್ನ ಕೈ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಬಲಗೈಯ 4 ಬೆರಳುಗಳು ಸೇರಿದಂತೆ ಪಾದವನ್ನೂ ಚಿಕಿತ್ಸೆ ನಡೆಸಿ ತುಂಡರಿಸಲಾಗಿದೆ. ಅಂದು ವೈದ್ಯರು ಮಾಡಿದ ಯಡವಟ್ಟನಿಂದ ಇಂದಿಗೂ ಯುವತಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಅಂಗವಿಕಲ ಭತ್ಯೆಯು ನಿಂತಿದ್ದು, ಇದೀಗ ಜೀವನ ನಡೆಸುವುದೇ ಇವರಿಗೆ ದುಸ್ತರವಾಗಿದೆ. ಲಾಕ್ ಡೌನ್ ಆಗುವ ಮೊದಲು ಕೆಲವೊಂದಿಷ್ಟು ಜನ ಸಹಾಯಕ್ಕೆ ಬಂದಿದ್ದರು. ಆದರೀಗ ಯಾರೂ ಕೂಡಾ ನನ್ನ ಸಂಕಷ್ಟಕ್ಕೆ ನೆರವಾಗುತ್ತಿಲ್ಲ. ಹೀಗಾಗಿ ಊಟ ಮತ್ತು ಚಿಕಿತ್ಸೆಗೆ ಹಣವಿಲ್ಲದೆ ಕಷ್ಟವಾಗಿದೆ ಎನ್ನುತ್ತಾರೆ ಈ ಯುವತಿ.
ಜಿಲ್ಲಾಧಿಕಾರಿ ಅವರು ಸರ್ಕಾರದಿಂದ ಬರಬೇಕಿದ್ದ ಅನುಕೂಲಗಳನ್ನು ಮಾಡುವುದಾಗಿ ಭರವಸೆ ನೀಡಿದ್ರಂತೆ. ಆದ್ರೆ ಇದೀಗ ಯಾರೂ ಬರದೆ ಇರೋದು ಮನೆ ಬಾಡಿಗೆಗೂ ಹಣವಿಲ್ಲದೆ ಬದುಕು ನಡೆಸುತ್ತಿದ್ದಾರೆ. ಇವರ ಕಷ್ಟಕ್ಕೆ ಸಹೃದಯರು, ಸರ್ಕಾರ ಹಾಗೂ ಜಿಲ್ಲಾಡಳಿತ ಸ್ಪಂದಿಸಬೇಕಿದೆ.