ಹುಬ್ಬಳ್ಳಿ:ಅವರೆಲ್ಲ ಕೊರೊನಾ ವಾರಿಯರ್ಸ್. ಕೋವಿಡ್ನಿಂದ ಮೃತಪಟ್ಟರೆ 30 ಲಕ್ಷ ರೂ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು. ಆದ್ರೆ ಇದು ಕೇವಲ ಭರವಸೆ ಆಗಿಯೇ ಉಳಿದಿದ್ದು, ಮೃತಪಟ್ಟವರ ಕುಟುಂಬಕ್ಕೆ ನಯಾಪೈಸೆಯೂ ದಕ್ಕಿಲ್ಲ.
ಅನ್‌ಲಾಕ್ ಬಳಿಕ ರಾಜ್ಯ ಸರ್ಕಾರ ಕಳೆದ ವರ್ಷ ಸಾರಿಗೆ ಇಲಾಖೆ ಬಸ್ಗಳನ್ನು ರಸ್ತೆಗಿಳಿಸಿದೆ. ಈ ವೇಳೆ ಸರ್ಕಾರ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಘೋಷಣೆ ಮಾಡಿತ್ತು. ಕೋವಿಡ್ಗೆ ಸಾರಿಗೆ ಇಲಾಖೆ ಸಿಬ್ಬಂದಿಗಳು ಮೃತಪಟ್ಟರೆ 30 ಲಕ್ಷ ರೂ ಪರಿಹಾರ ನೀಡುವುದಾಗಿ ಡಿಸಿಎಂ ಲಕ್ಷ್ಮಣ ಸವದಿ ಆದೇಶ ಹೊರಡಿಸಿದ್ದರು. ಸಾರಿಗೆ ಇಲಾಖೆಯಿಂದಲೇ ಪರಿಹಾರದ ಹಣ ಭರಿಸುವುದಾಗಿ ತಿಳಿಸಲಾಗಿತ್ತು.
ದುರಂತ ಅಂದ್ರೆ ಸಾರಿಗೆ ಸಚಿವರ ಈ ಆದೇಶ ಹೊರಬಿದ್ದು ವರ್ಷಗಳೇ ಕಳೆದಿದೆ. ಆದ್ರೆ ಇದುವರೆಗೂ ಒಬ್ಬನೇ ಒಬ್ಬ ಸಿಬ್ಬಂದಿಗೂ ನಯಾಪೈಸೆ ಪರಿಹಾರದ ಹಣ ಬಂದಿಲ್ಲ. ಕೋವಿಡ್ ಮೊದಲ ಅಲೆಯಲ್ಲಿ ವಾಯವ್ಯ ಸಾರಿಗೆ ನಿಗಮದ ವ್ಯಾಪ್ತಿಯ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ವಿಭಾಗದಲ್ಲಿ ಮೊದಲ ಅಲೆಯಲ್ಲಿ ಕೋವಿಡ್ಗೆ 31 ಚಾಲಕ, ನಿರ್ವಾಹಕರು ಸಾವನ್ನಪ್ಪಿದ್ದು, ಪರಿಹಾರ ಮಾತ್ರ ಮರೀಚಿಕೆಯಾಗಿದೆ.
ಮೊದಲ ಅಲೆಯಲ್ಲಿ ಸುಮಾರು 30 ಜನ ಸಾವನ್ನಪ್ಪಿದ್ದು, ಅವರಿಗೆ ಪರಿಹಾರ ನೀಡುವ ಕಾರ್ಯ ಸದ್ಯ ಜನರೇಟ್ ಆಗಿದೆ. 2ನೇ ಅಲೆಯಲ್ಲೂ 40 ಜನ ಸಾವನ್ನಪ್ಪಿದ್ದು, ಸುಮಾರು 500 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮೃತರ ಮೆಡಿಕಲ್ ರಿಪೋರ್ಟ್ಗಳನ್ನೆಲ್ಲ ರೆಡಿ ಮಾಡಿ, ಕೇಸ್ ರೆಕಾರ್ಡ್ ತಯಾರಿಸಿ ಇಲಾಖೆಗೆ ಕಳುಹಿಸಿ ಪರಿಹಾರ ನೀಡಲಾಗುತ್ತದೆ. ಆದರೆ ಈವರೆಗೂ ಯಾರಿಗೂ ಪರಿಹಾರ ಸಿಕ್ಕಿಲ್ಲ ಎಂದು ವಾಯವ್ಯ ಸಾರಿಗೆಯ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣಾ ಬಾಜಪೇಯಿ ಮಾಹಿತಿ ನೀಡಿದ್ದಾರೆ.