ಹುಬ್ಬಳ್ಳಿ:ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಏಳು ತಿಂಗಳು ಕಳೆದರೂ ಚುನಾಯಿತ ಸದಸ್ಯರಿಗೆ ಇನ್ನೂ ಅಧಿಕಾರ ಸಿಕ್ಕಿಲ್ಲ. ಇದರಿಂದ ಮಹಾನಗರ ಪಾಲಿಕೆಯ ಅಧಿಕಾರ ಅಧಿಕಾರಿಗಳ ಕೈಯಲ್ಲಿಯೆ ಉಳಿದಿದ್ದು, ನೂತನ ಸದಸ್ಯರು ಇದ್ದು ಇಲ್ಲದಂತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಪಕ್ಷಿಯ ಸದಸ್ಯರಿಂದಲೇ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ಹೊರ ಬರುತ್ತಿದೆ.
ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಮೇ ತಿಂಗಳಲ್ಲಿ ಜರುಗುವ ಸಾಧ್ಯತೆ ಇದ್ದು, ಏಪ್ರಿಲ್ ತಿಂಗಳಲ್ಲಿ ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದೆ. ಅಧಿಸೂಚನೆ ಮುನ್ನವೇ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಗೆ ಅಧಿಸೂಚನೆ ಹೊರಡಿಸಿದರೆ ಮಾತ್ರ ಕಾರ್ಪೋರೇಟರ್ಗಳಿಗೆ ಅಧಿಕಾರ ದೊರೆಯಲಿದೆ. ಇಲ್ಲದಿದ್ದರೆ ಎಂಎಲ್‌ಸಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಅಂದರೆ, ಜೂನ್ ತಿಂಗಳು ಬಳಿಕವೇ ಸರ್ಕಾರ ಮನಸು ಮಾಡಿದರೆ ಮೇಯರ್, ಉಪಮೇಯರ್ ಆಯ್ಕೆ ನಡೆಯಬಹುದು. ಇದರಿಂದ ಜನರು ಮಾತ್ರ ನಿರಾಶೆ ಭಾವನೆಯಲ್ಲಿಯೇ ಜೀವನ ನಡೆಸುವಂತಾಗಿದೆ.
ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಬರೋಬ್ಬರಿ ಏಳು ತಿಂಗಳು ಕಳೆದಿವೆ. ವಾರ್ಡ್ ಪುನರ್ವಿಂಗಡಣೆ ಬಳಿಕ 82 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 41 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಪಡೆದಿದೆ. ಇನ್ನೇನು ಮೇಯರ್ ಉಪಮೇಯರ್ ಆಯ್ಕೆಗೆ ಅಧಿಸೂಚನೆ ಹೊರಬೀಳಲಿದೆ ಎಂದು ಅಧಿಕಾರದ ಕನಸು ಕಂಡಿದ್ದ ಕಾರ್ಪೋರೆಟರ್ಗಳ ನಿರೀಕ್ಷೆ ಇನ್ನೂ ಹಾಗೆ ಮುಂದುವರೆದಿದೆ.