ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆ ಇಡೀ ಉತ್ತರ ಕರ್ನಾಟಕ ಭಾಗದ ಬಡರೋಗಿಗಳಿಗೆ ಸಂಜೀವಿನಿ ಎಂದೇ ಹೆಸರುವಾಸಿಯಾಗಿರುವ ಆಸ್ಪತ್ರೆ. ನೂರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಆ ಆಸ್ಪತ್ರೆಯಲ್ಲಿ ತೆರೆದ ಹೃದ್ರೋಗ ಶಸ್ತ್ರ ಚಿಕಿತ್ಸೆಗೆ ಬೇಕಾದ ನುರಿತ ತಜ್ಞರೂ ಇಲ್ಲ, ಅಗತ್ಯ ಸಲಕರಣೆಗಳೂ ಇಲ್ಲ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಉತ್ತರ ಕರ್ನಾಟಕದ ಐದಾರು ಜಿಲ್ಲೆಯ ರೋಗಿಗಳಿಗೆ ಆಧಾರವಾದ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಕನಿಷ್ಠ 20-30 ಮತ್ತು ವರ್ಷಕ್ಕೆ 500 ರಿಂದ 600ಕ್ಕೂ ಹೆಚ್ಚು ಹೃದಯ ರೋಗಿಗಳು ದಾಖಲಾಗುತ್ತಾರೆ. ಆದರೆ ಇಲ್ಲಿ ಓಪನ್ ಹಾರ್ಟ್ ಸರ್ಜರಿಗೆ ನುರಿತ ತಜ್ಞ ವೈದ್ಯರಿಲ್ಲ. ಅಗತ್ಯ ಸಲಕರಣೆಗಳಿಲ್ಲದೇ ಸಾರ್ವಜನಿಕರು ಪರದಾಡುವಂತಾಗಿದೆ. ಈ ಅವ್ಯವಸ್ಥೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ಹೃದಯ ರೋಗಕ್ಕೆ ಸಿಗುತ್ತಿಲ್ಲ ಸೂಕ್ತ ಚಿಕಿತ್ಸೆ - ಪ್ರತಿಕ್ರಿಯೆ ಹೃದಯ ಸಂಬಂಧಿ ಕಾಯಿಲೆಗಳಿಗಾಗಿ ಸಿರಿವಂತರು ಖಾಸಗಿ ಆಸ್ಪತ್ರೆ ಮೊರೆ ಹೋದರೆ, ಅದೆಷ್ಟೋ ಬಡವರು ಚಿಕಿತ್ಸೆ ಪಡೆಯದೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎಲ್ಲ ವಯಸ್ಕರಲ್ಲಿಯೂ ಹೆಚ್ಚಾಗುತ್ತಿದೆ. ಸರಿಯಾದ ಚಿಕಿತ್ಸೆ ದೊರಕದೇ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ರೆ ಬಡರೋಗಿಗಳಿಗೆ ಸಂಜೀವಿನಿ ಎಂದು ಕರೆಸಿಕೊಳ್ಳುವ ಕಿಮ್ಸ್ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ನೀಡಲು ಸಲಕರಣೆಗಳ ಸೌಲಭ್ಯವಿಲ್ಲದೇ ಇಲ್ಲಿನ ವೈದ್ಯರು ಬೆಂಗಳೂರಿನಲ್ಲಿರುವ ಜಯದೇವ ಆಸ್ಪತ್ರೆ ಸೇರಿದಂತೆ ಹಲವಾರು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಿದ್ದಾರೆ ಎನ್ನುವ ಆರೋಪ ಸಾರ್ವಜನಿಕರದ್ದು.
ಈ ಕುರಿತಂತೆ ಮಾತನಾಡಿರುವ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಇನ್ನು ಎರಡ್ಮೂರು ತಿಂಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮೈಸೂರು: ಇಂಜಿನಿಯರ್ ಶ್ರೀನಿವಾಸ್ ಬ್ಯಾಂಕ್ ಲಾಕರ್ ಪರಿಶೀಲಿಸುತ್ತಿರುವ ಎಸಿಬಿ