ಹುಬ್ಬಳ್ಳಿ:ನನ್ನನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲು ಸಾಧ್ಯವಿಲ್ಲ. ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದೇನೆ. ಈ ಬಗ್ಗೆ ಪ್ರಧಾನಮಂತ್ರಿ ಅವರಿಗೂ ಪತ್ರ ಬರೆದಿದ್ದೇನೆ. ನಾನು ಸತ್ಯವನ್ನೇ ಮಾತನಾಡುವುದರಿಂದ ನನ್ನನ್ನು ಉಚ್ಛಾಟನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ಸದಸ್ಯರು ಕಾವೇರಿ ವಸತಿ ಗೃಹದಲ್ಲಿ ಕುಳಿತು ಒಂದೊಂದು ಇಲಾಖೆ ನಿರ್ವಹಣೆ ಮಾಡುತ್ತಿದ್ದಾರೆ. ಮರಿ ಮೊಮ್ಮಕ್ಕಳು ಕೂಡ ತಾತನ ಮುಂದೆ ವರ್ಗಾವಣೆ ಅರ್ಜಿ ಹಿಡಿದರೂ ಅಚ್ಚರಿ ಪಡಬೇಕಿಲ್ಲ ಎಂದು ಕುಟುಂಬ ರಾಜಕಾರಣದ ಕುರಿತು ಲೇವಡಿ ಮಾಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶೀಘ್ರದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ. ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದೆ ಎಲ್ಲ ನಾಯಕರು ಧ್ವನಿ ಎತ್ತಲಿದ್ದಾರೆ. ಮಾಧ್ಯಮದಲ್ಲಿ ಪ್ರಸಾರ ಆಗುತ್ತಿದ್ದಂತೆ ಬೆಂಗಳೂರಿನ ಭಾಗದವರು ಯಾರೂ ಮುಖ್ಯಮಂತ್ರಿ ಆಗಲ್ಲ. ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗುತ್ತಾರೆ.
ನಾನು ಈ ಹಿಂದೆ ರೈಲ್ವೆ ಮಂತ್ರಿಯಾಗಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಇಟ್ಟುಕೊಂಡಿದ್ದೇನೆ. ನನಗೆ ಅವಕಾಶ ಕೊಟ್ಟರೆ ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ ಎಂದು ಹೇಳುವ ಮೂಲಕ ತಾವು ಮುಖ್ಯಮಂತ್ರಿ ರೇಸ್ನಲ್ಲಿರುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಮನದಿಂಗಿತ ವ್ಯಕ್ತಪಡಿಸಿದರು.