ನಜ್ಮಾ ಎಂ.ಪೀರಜಾದೆಗೆ ಒಲಿದ "ಸರ್ವೋತ್ತಮ ಸೇವಾ ಪ್ರಶಸ್ತಿ" - ಬೆಳಗಾವಿ ಮರು ಸರ್ವೇ
ಭೂ ಮಾಪನ ಕಂದಾಯ, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಮತ್ತು ಪದನಿಮಿತ್ತ ಉಪನಿರ್ದೇಶಕಿ ನಜ್ಮಾ ಎಂ.ಪೀರಜಾದೆ ಅವರು "ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ"ಗೆ ಭಾಜನರಾಗಿದ್ದಾರೆ.

ಧಾರವಾಡ: ಭೂ ಮಾಪನ ಕಂದಾಯ, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಮತ್ತು ಪದನಿಮಿತ್ತ ಉಪನಿರ್ದೇಶಕಿ ನಜ್ಮಾ ಎಂ.ಪೀರಜಾದೆ ಅವರು "ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ"ಗೆ ಭಾಜನರಾಗಿದ್ದಾರೆ.
ಇಲಾಖೆಯ ವಿವಿಧ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನಮನ್ನಣೆ ಗಳಿಸಿ, ರೈತಾಪಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಲಾಖೆಯನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿರುವುದನ್ನು ಪರಿಗಣಿಸಿ 2019-20 ನೇ ಸಾಲಿನ ರಾಜ್ಯ "ಸರ್ವೋತ್ತಮ ಸೇವಾ ಪ್ರಶಸ್ತಿ" ನೀಡಲಾಗಿದೆ ಎಂದು ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಜ.26 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಜ್ಮಾ ಅವರನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಅಭಿನಂದಿಸಿದ್ದಾರೆ. ನಜ್ಮಾ ಪೀರಜಾದೆ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಭೂದಾಖಲೆಗಳ ಸ್ಕ್ಯಾನಿಂಗ್ ಕಾರ್ಯ, ಬಾಗಲಕೋಟೆಯಲ್ಲಿ 60 ಸಾವಿರ ಭೂ ದಾಖಲೆಗಳ ಸರಿಪಡಿಸುವಿಕೆ, ಬೆಳಗಾವಿ ಮರು ಸರ್ವೇ, ಗ್ರಾಮ ನಕಾಶೆಗಳು ಹಾಗೂ ಆಕಾರಬಂಧ ಡಿಜಿಟಲೀಕರಣ, ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಕಾರ್ಯ, ಸರ್ಕಾರಿ ಭೂಮಿಯ ಸರ್ವೆ ಸೇರಿದಂತೆ ನ್ಯಾಯಾಲದಲ್ಲಿರುವ ಸಾವಿರಾರು ವ್ಯಾಜ್ಯಗಳ ಇತ್ಯರ್ಥಕ್ಕೆ ಶ್ರಮಿಸಿದ್ದರು.