ಹುಬ್ಬಳ್ಳಿ :ಆಕ್ಷೇಪಾರ್ಹ ವಿಡಿಯೋ ಹರಿಬಿಟ್ಟು ಕೋಮುಗಲಭೆಗೆ ಮೂಲವಾಗಿರುವ ಯುವಕ ಅಭಿಷೇಕ ಹಿರೇಮಠನನ್ನು ಹುಬ್ಬಳ್ಳಿಯ ನ್ಯಾಯಾಲಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಹಾಜರುಪಡಿಸಲಾಗಿತ್ತು. ಹುಬ್ಬಳ್ಳಿಯ ಜೆ.ಎಂ.ಎಫ್.ಸಿ ಕೋರ್ಟ್ನಲ್ಲಿ ಈ ಸಂಬಂಧ ವಿಚಾರಣೆ ನಡೆಸಿದೆ. ಆರೋಪಿಗೆ ಏಪ್ರಿಲ್ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಗಲಭೆಗೆ ಕಾರಣವಾಗಿದ್ದ ಅಭಿಷೇಕ್ ಹಿರೇಮಠ್ ಪರವಾಗಿ ಅವರ ವಕೀಲರು ಬೇಲ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಾಳೆ ಸರ್ಕಾರಿ ವಕೀಲರಿಂದ ತಕರಾರು ಅರ್ಜಿ ಸಲ್ಲಿಕೆಯಾಗಲಿದೆ. ಅರ್ಜಿ ಸಲ್ಲಿಕೆ ನಂತರ ಜಾಮೀನು ನೀಡಬೇಕಾ, ಬೇಡವಾ ಎಂಬ ಬಗ್ಗೆ ನಿರ್ಧಾರವಾಗುತ್ತದೆ.
ನೂರಕ್ಕೂ ಹೆಚ್ಚು ಜನರ ಬಂಧನ: ಹಳೇ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಇಂದು ಮಧ್ಯಾಹ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಖಾಕಿ ಪಡೆ ಮತ್ತಷ್ಟು ತನಿಖೆ ಚುರುಕುಗೊಳಿಸಲಿದೆ. ಗಲಾಟೆ ಮಾಡಿ ಪರಾರಿಯಾಗಿದ್ದವರ ಹೆಡೆಮುರಿ ಕಟ್ಟಲು ಪೊಲೀಸರು ಎರಡು ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.