ಧಾರವಾಡ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಶಾಸಕ ಸಿ.ಎಂ ನಿಂಬಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆಗೆ ಭೇಟಿ ನೀಡಿದ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕೆರೆ ಒಡೆಯಲು ಅಧಿಕಾರಿಗಳೇ ಕಾರಣ, ಗೇಟ್ ಓಪನ್ ಆಗದ ಹಿನ್ನೆಲೆ ಈ ಅವಾಂತರ ಸೃಷ್ಟಿಯಾಗಿದೆ ಎಂದು ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಅವರು ಮಂತ್ರಿಗಳಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ವಿವರಿಸಿದರು.
ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಸಚಿವರ ಭೇಟಿ, ಪರಿಶೀಲನೆ ಬಳಿಕ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಶಾಸಕ ಸಿ.ಎಂ. ನಿಂಬಣ್ಣವರ, ಗೇಟ್ ಓಪನ್ ಮಾಡಿದ್ರೆ ತಿಳಿಸಿ ಇಲ್ಲದಿದ್ದರೆ ನಿಮ್ಮನ್ನ ಕೆರೆಗೆ ಒಗೆಯುತ್ತೆನೆ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು. ಸಣ್ಣ ನೀರಾವರಿ ಇಲಾಖೆಯ ಎಇಇ ಮತ್ತು ಇಇ ಅವರ ವಿರುದ್ದ ಶಾಸಕರು ಫುಲ್ ಗರಂ ಆಗಿದ್ದರು. ಹುಲಿಕೇರಿ ಗ್ರಾಮದ ಕೆರೆ ಒಡೆಯಲು ಈ ಅಧಿಕಾರಿಗಳೇ ಕಾರಣ ಎಂದು ಸ್ಥಳೀಯರು ಮತ್ತು ಮಾಜಿ ಶಾಸಕರು ದೂರಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ಜೋಶಿ, ಅತಿವೃಷ್ಟಿ ಹಿನ್ನೆಲೆ ಕೇಂದ್ರಕ್ಕೆ ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕಿದೆ. ತಕ್ಷಣಕ್ಕೆ ಬೇಕಾದ ಪರಿಹಾರ ಕೇಂದ್ರ ಸರ್ಕಾರ ಕೊಡಲಿದೆ. ಈ ಹಿಂದೆಯೂ ಸಹ ನೆರವಿಗೆ ಬಂದಿತ್ತು, ಈ ಸಲವೂ ಕೊಡುತ್ತೇವೆ. ನಾಳೆ ನಾನು ದೆಹಲಿಗೆ ಹೊರಟಿದ್ದು, ಈ ಕುರಿತು ಕೇಂದ್ರ ಗೃಹ ಮಂತ್ರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು.
ಎನ್.ಡಿ.ಆರ್.ಎಫ್ ನಿಯಮದಡಿ ಸಹಕಾರ ಕೊಡುತ್ತದೆ. ಹಿಂದಿನ ಯಾವುದೇ ಪರಿಹಾರ ಹಣ ಬಾಕಿ ಇಲ್ಲ. ಹಣಕಾಸು ಆಯೋಗದ ಸೂತ್ರದ ಅಡಿಯಲ್ಲಿ ಪರಿಹಾರ ನೀಡುತ್ತಾರೆ. ಅದಕ್ಕೆ ನಾವು ಕೇಂದ್ರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಒಂದು ರಾಜ್ಯಕ್ಕೆ ಹೆಚ್ಚು, ಕಡಿಮೆ ಕೊಡಲು ಬರೋದಿಲ್ಲ ಎಂದರು.