ಧಾರವಾಡ:ಜಿಲ್ಲೆಯಲ್ಲಿ ಈವರೆಗೆ 13,033 ಜನರನ್ನ ಕೋವಿಡ್-19 ತಪಾಸಣೆಗೊಳಪಡಿಸಿದ್ದು, ಅವರಲ್ಲಿ 12,432 ಜನರ ವರದಿ ನೆಗೆಟಿವ್ ಬಂದಿದೆ. ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು ತೃಪ್ತಿಕರವಾಗಿವೆ. ಜಿಲ್ಲೆಯು ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಧಾರವಾಡ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು ತೃಪ್ತಿಕರ: ಜಗದೀಶ್ ಶೆಟ್ಟರ್ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ ಹಾಗೂ ಇತರ ವಿಷಯಗಳ ಕುರಿತ ಪರಿಶೀಲನಾ ಸಭೆ ನಡೆಸಿದ ಅವರು, ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದಿರುವ 1,664 ಜನರನ್ನ ಸಾಂಸ್ಥಿಕ ಕ್ವಾರಂಟೈನ್ ಮಾಡಿರುವ ಬಗ್ಗೆ ಹಾಗೂ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸೀಲ್ ಡೌನ್ ತೆರವುಗೊಳಿಸಿರುವ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಸದ್ಯ ಚಿಕಿತ್ಸೆ ಪಡೆಯುತ್ತಿರುವ 33 ಜನರ ಆರೋಗ್ಯ ಸ್ಥಿತಿ, ಕೋವಿಡ್ ಆಸ್ಪತ್ರೆಯ ಸೌಕರ್ಯಗಳು, ಕಟ್ಟಡ, ರಸ್ತೆ ನಿರ್ಮಾಣ ಕಾಮಗಾರಿ, ವಾಣಿಜ್ಯ ವಹಿವಾಟು ಪುರಾರಂಭದ ಹಂತಗಳ ಕುರಿತು ಪರಿಶೀಲಿಸಿದರು.
ಪಡಿತರ ವಿತರಣೆಯಲ್ಲಿ ಅಕ್ಕಿ ಬದಲಿಗೆ ಬೇರೆ ಧಾನ್ಯ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೂ ಕೂಡ ಜನರ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ 2,09,445 ಕ್ವಿಂಟಾಲ್ ಕಡಲೆಯನ್ನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗಿದ್ದು, ರೈತರಿಗೆ ಸುಮಾರು 102 ಕೋಟಿ ರೂಪಾಯಿ ಪಾವತಿಸಲು ಕ್ರಮ ವಹಿಸಲಾಗುವುದು. ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡುವ ಕಾರ್ಯ ಚುರುಕುಗೊಳಿಸಿ, ಸಾಫ್ಟ್ವೇರ್ನಲ್ಲಿ ತೊಡಕುಗಳಿದ್ದರೆ ತಕ್ಷಣ ಸರಿಪಡಿಸಬೇಕು ಎಂದರು.
ಜಿಲ್ಲೆಯಲ್ಲಿ ಈವರೆಗೆ ಶೇ. 68ರಷ್ಟು ಕೈಗಾರಿಕಾ ಚಟುವಟಿಕೆಗಳು ಪ್ರಾರಂಭವಾಗಿವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಪಾವತಿ ಕಾರ್ಯ ಸಾಧ್ಯವಾದಷ್ಟು ತ್ವರಿತಗೊಳಿಸಿದರೆ ಗ್ರಾಮೀಣ ಜನರು ನಗರಗಳಿಗೆ ಉದ್ಯೋಗ ಅರಸಿ ಬೇರೆಡೆ ವಲಸೆ ಹೋಗುವುದು ತಪ್ಪುತ್ತದೆ. ಎಪಿಎಂಸಿಗಳು ಮಧ್ಯವರ್ತಿಗಳಿಲ್ಲದೇ ನೇರವಾಗಿ ರೈತರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವ ರೈತ ಸಂತೆಗಳಿಗೆ ಉತ್ತೇಜನ ನೀಡಬೇಕು. ಅವಳಿ ನಗರದಲ್ಲಿ ತರಕಾರಿ ಮಾರುಕಟ್ಟೆಗಳು ಕೇಂದ್ರೀಕರಣವಾಗದಂತೆ ಕ್ರಮ ಕೈಗೊಂಡು ನಗರದ ವಿವಿಧ ಮೈದಾನಗಳಿಗೆ ವಿಕೇಂದ್ರೀಕರಣ ಮಾಡಿ ಜನದಟ್ಟಣೆಯನ್ನು ನಿಯಂತ್ರಿಸಬೇಕು ಎಂದು ಸೂಚಿಸಿದರು.