ಧಾರವಾಡ: ಸಚಿವ ಆನಂದ್ ಸಿಂಗ್ ಬೇರೆ ಖಾತೆ ಬೇಕು ಅಂತಾ ಕೇಳಿದ್ದಾರೆ. ಸರ್ಕಾರದಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಹೇಳಿದರು.
ಆನಂದ್ ಸಿಂಗ್ ಖಾತೆ ಕುರಿತ ಕ್ಯಾತೆ ಬಗ್ಗೆ ಸಚಿವ ಡಾ ಸಿ ಎನ್ ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿರುವುದು.. ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಉತ್ತಮ ವ್ಯಕ್ತಿ. ಸಹನೆ ಇರುವಂತಹವರು, ತಮ್ಮ ಭಾವನೆಗಳನ್ನು ನಾಲ್ಕು ಗೋಡೆ ಮಧ್ಯೆ ಹೇಳಿಕೊಂಡಿದ್ದಾರೆ. ಎಲ್ಲಿಯೂ ಬೇರೆ ರೀತಿಯಲ್ಲಿ ಅವರು ಹೇಳಿಕೆ ನೀಡಿಲ್ಲ. ಸಿಎಂ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಆನಂದ್ ಸಿಂಗ್ ಮುಂದೆ ಕೆಲಸ ಮಾಡುತ್ತಾರೆ :ಅಸಮಾಧಾನದಿಂದ ಖಾತೆ ಕೆಲಸಕ್ಕೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲ ಸಹಕಾರ ಕೊಡುತ್ತಿದ್ದಾರೆ. ಯಾವುದೇ ಸಮಸ್ಯೆ, ಗೊಂದಲಗಳಿಲ್ಲ. ಅವರು ಬಹಳ ಕರ್ತವ್ಯ ನಿಷ್ಠೆ ಇರುವಂತಹವರು. ಬಹಳ ಜವಾಬ್ದಾರಿಯುತ ಮನುಷ್ಯ. ವೈಯಕ್ತಿಕವಾಗಿ ಲೋಪದೋಷ ಇಲ್ಲದಂತೆ ಇರುತ್ತಾರೆ. ಉತ್ತಮವಾಗಿ ಕಾರ್ಯ ನಿರ್ವಹಿಸುವ ನನ್ನ ಸ್ನೇಹಿತರು, ಅವರು ಮುಂದೆ ಕೆಲಸ ಮಾಡುತ್ತಾರೆ ಎಂದು ಭರವಸೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ :ದೇಶಾದ್ಯಂತ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರವಾಗಿ ಮಾತನಾಡಿ, ಹದಿನೈದು ವರ್ಷದ ಅವಧಿಯಲ್ಲಿ ಅನುಷ್ಠಾನಕ್ಕೆ ಅವಕಾಶ ಇದೆ. ಆಯಾ ರಾಜ್ಯಗಳು ತಮ್ಮ ಸಮಯ ತೆಗೆದುಕೊಳ್ಳುತ್ತಿವೆ. ನಮ್ಮ ರಾಜ್ಯವೇ ಮೊದಲು ಜಾರಿಗೆ ತರುತ್ತಿದೆ. ರಾಜ್ಯದ ಎಲ್ಲ ವಿವಿಗಳಲ್ಲಿ ಈಗಾಗಲೇ ಕಾರ್ಯ ನಡೆದಿದೆ ಎಂದು ಸಚಿವರು ಹೇಳಿದರು.
ಕೊರೊನಾ ಮಧ್ಯೆಯೇ ವಿವಿಧ ಕಾರ್ಯಕ್ರಮಗಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಾಂಕೇತಿಕವಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಜೀವ ರಕ್ಷಣೆ ಜೊತೆಗೆ ಜೀವನಾಂಶವೂ ನಡೆಯಬೇಕಿದೆ. ಹೀಗಾಗಿ, ಉದ್ಯಮಶೀಲರನ್ನು ಇಂದು ಧಾರವಾಡದಲ್ಲಿ ಸಾಂಕೇತಿಕವಾಗಿ ಗೌರವಿಸಿದ್ದೇವೆ ಎಂದರು.
ಇದನ್ನೂ ಓದಿ:ಸಚಿವ ಆನಂದ್ ಸಿಂಗ್ ಎಲ್ಲೂ ಹೋಗಿಲ್ಲ, ಸಮಾಧಾನಗೊಂಡಿದ್ದಾರೆ: ಶಾಸಕ ರಾಜು ಗೌಡ
ಜನಪ್ರತಿನಿಧಿಗಳ ಕಾರ್ಯಕ್ರಮಗಳ ವಿಚಾರವಾಗಿ ಮಾತನಾಡಿ, ನಿಯಮಗಳೊಂದಿಗೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಾಂಕೇತಿಕವಾಗಿ, ಸರಳ ಕಾರ್ಯಕ್ರಮ ನಡೆಸುವುದು ನಮ್ಮ ಉದ್ದೇಶ ಆಗಿದೆ. ರಾಜಕೀಯ ಪಕ್ಷಗಳೆಂದ್ರೆ ಬೃಹತ್ ಕಾರ್ಯಕ್ರಮಗಳೇ ಇರುತ್ತಿದ್ದವು. ಆದ್ರೆ, ಈಗ ತೆಳ್ಳಗೆ, ಬೆಳ್ಳಗೆ ನಡೆಯುತ್ತಿದೆ. ಕಡಿವಾಣ ಹಾಕಿಕೊಂಡು, ಕೈ ಕಟ್ಟಿಕೊಂಡು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.